*ಶಿಕ್ಷಕರ ವರ್ಗಾವಣೆಯ ಚಕ್ರವ್ಯೂಹ !*
ವಿಕ ಸುದ್ದಿಲೋಕ | Jul 8, 2016,
*ಒಂಬತ್ತು ವರ್ಷಗಳಿಂದ ಪರಿಹಾರ ಕಾಣದ ಸಂಕಟ*
ರಾಜ್ಯದಲ್ಲಿನ ಸರಕಾರಿ ಶಾಲೆಗಳ ಶಿಕ್ಷಕರು ತಾವು ಬಯಸಿದ ಜಿಲ್ಲೆಗೆ ವರ್ಗಾವಣೆಯಾಗಬೇಕೆಂದರೆ ನಿಜಕ್ಕೂ 'ಚಕ್ರವ್ಯೂಹ' ಭೇದಿಸಲು ಹೋದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ವರ್ಗಾವಣೆ ನೀತಿಯಲ್ಲಿನ ನ್ಯೂನತೆಗಳಿಂದ ಶಿಕ್ಷಕರು ಅಕ್ಷರಶಃ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ವರ್ಗಾವಣೆ ಕಾಯಿದೆಯ ಕಠಿಣ ನಿಯಮಗಳಿಂದಾಗಿ ಕಳೆದ 9 ವರ್ಷಗಳಿಂದ ನೋವು ನುಂಗಿ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೆಲಸಕ್ಕೆ ಸೇರಿದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಏಳು ವರ್ಷ ಅದೇ ಜಿಲ್ಲೆಯಲ್ಲಿ ಕೆಲಸ ಮಾಡಿದರು. ಕೊನೆಗೆ ಪರಸ್ಪರ ವರ್ಗಾವಣೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಲೆಯೊಂದಕ್ಕೆ ವರ್ಗಾವಣೆಯಾಗಿ ಬಂದರು. ಅಲ್ಲಿಗೆ ವರ್ಗಾವಣೆಯಾಗಿ ಮೂರು ವರ್ಷ ಕಳೆದಿವೆ. ಆದರೂ, ತನ್ನ ತವರು ಜಿಲ್ಲೆಯಾದ ತುಮಕೂರಿಗೆ ವರ್ಗಾವಣೆಯಾಗಲು ಸಾಧ್ಯವಾಗುತ್ತಿಲ್ಲ. ಅಂತರ್‌ಜಿಲ್ಲಾ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಇರುವುದು ಇದಕ್ಕೆ ಕಾರಣ.
*ಶಿಕ್ಷಕಿಯದು ಮತ್ತೊಂದು ಕಥೆ:*
ಕೋಲಾರ ಜಿಲ್ಲೆಯ ಮತ್ತೊಬ್ಬ ಶಿಕ್ಷಕಿಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಕೆಲಸ ಸಿಕ್ಕಿತು. ಆದರೆ, ನಾಲ್ಕು ವರ್ಷ ಕಳೆದರೂ ಆ ಶಿಕ್ಷಕಿಗೆ ವರ್ಗಾವಣೆಗೆ ಅವಕಾಶ ಸಿಗಲೇ ಇಲ್ಲ. ಇಬ್ಬರು ಮಕ್ಕಳೊಂದಿಗೆ ಶಿಕ್ಷಕಿ ಆ ಗ್ರಾಮದಲ್ಲೇ ಕೆಲಸ ಮಾಡಿದರೆ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಅವರ ಪತಿ ಬೆಂಗಳೂರಿನಲ್ಲೇ ಉಳಿಯುವಂತಾಯಿತು.
ಕೊನೆಗೆ, ಪತಿ-ಪತ್ನಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ನಂತರ ಆ ಶಿಕ್ಷಕಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆಯಾಯಿತು. ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮವೊಂದರಲ್ಲಿ ಆ ಶಿಕ್ಷಕಿ ಕೆಲಸ ಮಾಡುತ್ತಿದ್ದಾರೆ. ಗಂಡ-ಮಕ್ಕಳು ಬೆಂಗಳೂರಿನಲ್ಲಿ ಇರುವುದಕ್ಕೂ ಕಷ್ಟ. ಕೊನೆಗೆ, ಗಂಡನೇ ದೊಡ್ಡಬಳ್ಳಾಪುರಕ್ಕೆ ಮನೆ ಸ್ಥಳಾಂತರಿಸಿ, ಅಲ್ಲಿಂದಲೇ ನಿತ್ಯ ಕೆಲಸಕ್ಕಾಗಿ ಓಡಾಡುತ್ತಿದ್ದಾರೆ.
ಇವು ಕೇವಲ ಒಂದೆರಡು ನೈಜ ಉದಾಹರಣೆಗಳಷ್ಟೇ. ಇದೇ ರೀತಿ ವರ್ಗಾವಣೆಗೆ ಅರ್ಜಿ ಹಾಕಿ ಕಾಯುತ್ತಿರುವ ಸಾವಿರಾರು ಶಿಕ್ಷಕರು ಬೇಸತ್ತುಹೋಗಿದ್ದಾರೆ.
*ನ್ಯೂನತೆಗಳು ಒಂದಲ್ಲ, ಹಲವು:*
ಶಿಕ್ಷಕರ ವರ್ಗಾವಣೆ ನೀತಿಯಲ್ಲಿ ಒಂದಲ್ಲ, ಹಲವು ನ್ಯೂನತೆಗಳಿವೆ. ಅವುಗಳನ್ನು ಗುರುತಿಸುತ್ತಾ ಹೋದರೆ ಉದ್ದನೆ ಪಟ್ಟಿಯೇ ಬೆಳೆಯುತ್ತದೆ. ಇನ್ನು, ಸಾಂಪ್ರದಾಯಿಕವಾಗಿ ಸರಕಾರ ಪ್ರತಿ ವರ್ಷ ಶೇ. 5ರಿಂದ 8ರ ಪ್ರಮಾಣದಲ್ಲಿ ವರ್ಗಾವಣೆ ಮಾಡಿದಲ್ಲಿ ಇಲಾಖೆಯಲ್ಲಿನ 2 ಲಕ್ಷಕ್ಕೂ ಅಕ ಶಿಕ್ಷಕರ ವರ್ಗಾವಣೆ ಮಾಡಲು 35 ವರ್ಷ ಬೇಕಾಗುತ್ತದೆ. ಇದನ್ನು ಶಿಕ್ಷಣ ಸಚಿವ ತನ್ವೀರ್ ಸೇಠ್ ಕೂಡ ಒಪ್ಪುತ್ತಾರೆ.
* ದಂಪತಿ ಪ್ರಕರಣದಲ್ಲಿ ಪತಿ ಅಥವಾ ಪತ್ನಿ ಸರಕಾರಿ ಅಥವಾ ಖಾಸಗಿ ನೌಕರರಾಗಿದ್ದಲ್ಲಿ ಮಾತ್ರ ವರ್ಗಾವಣೆಗೆ ಪರಿಗಣಿಸಲಾಗುತ್ತದೆ. ಆದರೆ, ಪತಿ ವ್ಯಾಪಾರ ಅಥವಾ ಕೃಷಿ ಮಾಡಿಕೊಂಡಿದ್ದರೆ ಅದನ್ನು ಪರಿಗಣಿಸುವುದಿಲ್ಲ. ಹಾಗಾದರೆ, ಒಬ್ಬ ವ್ಯಾಪಾರಿ ಅಥವಾ ಕೃಷಿಕ ಮನುಷ್ಯನಲ್ಲವೇ ಎಂಬುದು ಶಿಕ್ಷಕರ ಪ್ರಶ್ನೆ.
* ಇನ್ನು, ಅನಾರೋಗ್ಯ ಪ್ರಕರಣದಲ್ಲಿ ಗಂಭೀರ ಕಾಯಿಲೆಗಳಾದ ಕ್ಯಾನ್ಸರ್, ಕಿಡ್ನಿ ವೈಫಲ್ಯ, ಹೃದ್ರೋಗ ಸಂಬಂ ರೋಗಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಆದರೆ, ಬೆಂಗಳೂರಿಗೆ ಹೊಂದಿಕೊಂಡಂತಿರುವ ಜಿಲ್ಲೆಯಲ್ಲಿ ಕೆಲಸ ಮಾಡುವ ಶಿಕ್ಷಕಿಯೊಬ್ಬರ ಪತಿಗೆ ಕಿವಿ ಕೇಳುವುದಿಲ್ಲ, ಮಾತೂ ಬರುವುದಿಲ್ಲ. ಆದರೆ, ಬೇರೊಂದು ಜಿಲ್ಲೆಯಲ್ಲಿ ಕೆಲಸ ಮಾಡುವ ಶಿಕ್ಷಕಿ ಪತಿಯ ಪರಿಸ್ಥಿತಿಯನ್ನು ವಿವರಿಸಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರೂ ಅದನ್ನು ಇಲಾಖೆ ಪರಿಗಣಿಸಿಲ್ಲ.
* ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ (ಅಂತರ್‌ಘಟಕ) ವರ್ಗಾವಣೆಯಾಗಬೇಕಾದರೆ ಹರಸಾಹಸ ಮಾಡಬೇಕು. ಹಿರಿತನದ ಆಧಾರದಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಒಮ್ಮೆ ಅವಕಾಶ ಸಿಕ್ಕರೂ ಆತ ಅಲ್ಲೇ ಕೊಳೆಯಬೇಕಾಗುತ್ತದೆ. ಏಕೆಂದರೆ, ಮತ್ತೊಂದು ಜಿಲ್ಲೆಗೆ ವರ್ಗಾವಣೆಯಾಗಲು ಆತನಿಗೆ ಅವಕಾಶವೇ ಇಲ್ಲದಂತಾಗಿದೆ.
* ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನೇಮಕಗೊಂಡ ಶಿಕ್ಷಕರಿಗೆ ಸಾಮಾನ್ಯ ಹುದ್ದೆಗಳಿಗೆ ವರ್ಗಾವಣೆಗೆ ಅವಕಾಶ ಸಿಗುವುದಿಲ್ಲ. ಒಂದು ವೇಳೆ ಸಮಾನ ವೇತನ, ಸಮಾನ ಹುದ್ದೆಯ ವರ್ಗಾವಣೆಗೆ ಅವಕಾಶ ಸಿಕ್ಕಿದಲ್ಲಿ ಮಾತ್ರ ಅಂತಹ ಶಿಕ್ಷಕರು ಅರ್ಜಿ ಸಲ್ಲಿಸಬಹುದು.
* ಮಕ್ಕಳ ಸಂಖ್ಯೆಗಿಂತ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ಖಾಲಿ ಇರುವ ಶಾಲೆಗಳಿಗೆ ಮರು ನಿಯೋಜನೆ ಮಾಡಲು ಸರಕಾರ ಪ್ರಯತ್ನಿಸುತ್ತದೆ. ಆದರೆ, ವರ್ಗಾವಣೆಗೆ ಅವಕಾಶ ಕಲ್ಪಿಸುವುದಿಲ್ಲ. ಹೀಗಾಗಿ, ಸ್ವ-ಇಚ್ಛೆಯಿಂದ ವರ್ಗಾವಣೆ ಬಯಸುವ ಹೆಚ್ಚುವರಿ ಶಿಕ್ಷಕರಿಗೂ ವರ್ಗಾವಣೆಗೆ ಸರಕಾರ ಅವಕಾಶ ಕಲ್ಪಿಸಲಿ ಎಂಬುದು ಶಿಕ್ಷಕರ ಆಗ್ರಹ.
* 1999ರಲ್ಲಿ ಗ್ರಾಮೀಣ ಕೃಪಾಂಕ ಆಧಾರದಲ್ಲಿ ನೇಮಕಗೊಂಡ ಶಿಕ್ಷಕರಿಗೆ, 2005ರ ಪುನರ್‌ನೇಮಕಾತಿ ದಿನಾಂಕ ಹೊರತುಪಡಿಸಿ ಮೊದಲಿನ ಸೇವಾ ಅವಯನ್ನೇ ಪರಿಗಣಿಸಿ ವರ್ಗಾವಣೆ ಮಾಡಬೇಕು ಎಂಬುದು ಈ ಶಿಕ್ಷಕರ ಮನವಿ.
*ಶಿಕ್ಷಕರ ಬೇಡಿಕೆಗಳೇನು?:*
* ಅಂತರ್‌ಜಿಲ್ಲಾ ವರ್ಗಾವಣೆಗೆ ಕೇವಲ ಒಂದು ಸಲ ಅವಕಾಶ ಕಲ್ಪಿಸಲಾಗುತ್ತಿದೆ. ಅದನ್ನು ಕನಿಷ್ಠ 2 ಅವಗೆ ವಿಸ್ತರಿಸಿ.
* ಅಂತರ್‌ಘಟಕ ವರ್ಗಾವಣೆ ಪ್ರಮಾಣವನ್ನು ಶೇ. 1ರಿಂದ 3ರಷ್ಟು ಹೆಚ್ಚಿಸಿ.
* ಹುದ್ದೆ ಖಾಲಿ ಇರುವ ಕಡೆಗಳಲ್ಲಿ ಶಿಕ್ಷಕರನ್ನು ವರ್ಗ ಮಾಡಿ
* ಹೊಸ ನೇಮಕಾತಿ ಸಂದರ್ಭದಲ್ಲಿ ತಾಲೂಕು ಘಟಕ ಆಯ್ಕೆಯನ್ನು ಶಿಕ್ಷಕರಿಗೇ ಬಿಡಿ.
* ಮಾರಣಾಂತಿಕ ಕಾಯಿಲೆ ಹೊರತುಪಡಿಸಿ ಇತರೆ ಕಾಯಿಲೆಗಳಿಂದ ತೊಂದರೆ ಅನುಭವಿಸುತ್ತಿರುವವರಿಗೂ ವರ್ಗಾವಣೆಗೆ ಅವಕಾಶ ಕೊಡಿ.
* ಪರಸ್ಪರ ವರ್ಗಾವಣೆಗೆ ಶೇಕಡಾವಾರು ಪ್ರಮಾಣ ಮಿತಿ ನಿರ್ಬಂಧ ಹೇರಬೇಡಿ.
* ಪತಿ-ಪತ್ನಿ ಪ್ರಕರಣದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ.
-----
2007ರ ಶಿಕ್ಷಕರ ವರ್ಗಾವಣೆ ನಿಯಮಾವಳಿಗೆ ತಿದ್ದುಪಡಿ ತಂದ ನಂತರ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕೆಂಬ ಸರಕಾರದ ನಿರ್ಧಾರ ಸರಿಯಲ್ಲ. ಇದರಿಂದ ಸುಮಾರು 36ರಿಂದ 37 ಸಾವಿರ ಪತಿ-ಪತ್ನಿ ಪ್ರಕರಣ, ನಿಯಮಾವಳಿ ಪ್ರಕಾರ ವರ್ಗಾವಣೆಗೆ ಅರ್ಹರಿರುವ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಏಕಾಏಕಿ ಸರಕಾರ ವರ್ಗಾವಣೆ ನಿಲ್ಲಿಸುವುದು ತಪ್ಪು. ಮುಂದಿನ ವರ್ಷಕ್ಕೆ ಅನ್ವಯವಾಗುವಂತೆ ಸರಕಾರ ವರ್ಗಾವಣೆ ನೀತಿಗೆ ತಿದ್ದುಪಡಿ ತರಲಿ. ಆದರೆ, ಈ ವರ್ಷ ಹಳೆ ನೀತಿಯಂತೆಯೇ ವರ್ಗಾವಣೆ ಪ್ರಕ್ರಿಯೆ ನಡೆಸಲಿ. ಏಕಾಏಕಿ ಸರಕಾರ ವರ್ಗಾವಣೆ ನಿಲ್ಲಿಸುವುದು ತಪ್ಪು. 83 ಇಲಾಖೆಗಳಲ್ಲಿ ವರ್ಗಾವಣೆಗೆ ಅವಕಾಶ ಕಲ್ಪಿಸಿರುವ ಸರಕಾರ ಕೇವಲ ಶಿಕ್ಷಕರ ಮೇಲೆ ದಬ್ಬಾಳಿಕೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ? ವರ್ಗಾವಣೆ ಕೈಬಿಟ್ಟಲ್ಲಿ ನಾವು ಹೋರಾಟಕ್ಕೆ ಸಿದ್ಧ.
- ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ