ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

24.2.17

KANAKADASARU - KEERTHANEGALU -ಕನಕದಾಸರ ಕೀರ್ತನೆಗಳು

***ಕನಕದಾಸರ ಕೀರ್ತನೆಗಳು***



1. ನಮ್ಮಮ್ಮ ಶಾರದೆ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಿವನಾರಮ್ಮಾ
ಕಮ್ಮಗೋಲನ ವೈರಿಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ


ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ
ಕೋರೆದಾಡೆಯನಿವನಾರಮ್ಮ
ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೆ


ಉಟ್ಟ ಪಟ್ಟೆಯ ಬಿಗಿದುಟ್ಟ ಚಲ್ಲಣದ
ದಿಟ್ಟ ತಾನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೆ

ರಾಶಿ ವಿದ್ಯೆಯ ಬಲ ರಮಣೀ ಹಂಬಲನೊಲ್ಲ
ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿನೆಲೆಯಾದಿ
ಕೇಶವದಾಸ ಕಾಣೆ


ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ


2. ಹಣ್ಣು ಕೊಂಬುವ ಬನ್ನಿರಿ

ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಹಣ್ಣು ಕೊಂಬುವ ಬನ್ನಿರಿ
ಚೆನ್ನಬಾಲಕೃಷ್ಣನೆಂಬ
ಕೆನ್ನೆಗೊನೆ ಬಾಳೆಹಣ್ಣು

ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚ ಮಾವಿನಹಣ್ಣು

ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗವಂದಿತ ಪಾಲ್ಗಡಲೊಡೆಯನ ಹಣ್ಣು
ಸುಜನಭಕ್ತರೆಲ್ಲ ಕೊಳ್ಳಬನ್ನಿರಿ ಹಣ್ಣು

ತುರುವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣು
ಕರೆದರೆ ಕಂಬದೊಳು ಓ ಎಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುಣಾಳು ಕಾಗಿನೆಲೆಯಾದಿ ಕೇಶವ ಹಣ್ಣು

ಹಣ್ಣು ಕೊಂಬುವ ಬನ್ನಿರಿ ಹರಿದಾಸರು

3. ಭಕ್ತಿಯಿಲ್ಲದೆ ನರಗೆ
ಬಾಯಿ ನಾರಿದ ಮೇಲೆ ಏಕಾಂತವೇ?
ತಾಯಿ ತೀರಿದ ಮೇಲೆ ತವರಾಸೆಯೇ?

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ
ಬಣ್ಣ ಗುಂದಿದ ಮೇಲೆ ಬಹುಮಾನವೆ
ಪುಣ್ಯತೀರದ ಮೇಲೆ ಪರಲೋಕಸಾಧನವೆ
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ
ಚಳಿಯುರಿಗೆ ಚಂದನದ ಲೇಪ ಹಿತವೆ
ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ
ಬೆಲೆಬಿದ್ದ ಸರಕಿನೊಳು ಲಾಭವುಂಟೇ

ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ
ಸತ್ವ ತಗ್ಗಿದ ಮೇಲೆ ಸಾಮರ್ಥ್ಯವೆ
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ
ಭಕ್ತಿಯಿಲ್ಲದ ನರಗೆ ಮುಕ್ತಿಯಹುದೆ

4. ಕುಲ ಕುಲ ಕುಲವೆಂದು
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?

ಹುಟ್ಟಿದಾ ಯೋನಿಗಳಿಲ್ಲ ಮೆಟ್ಟದಾ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲವೋ
ಗುಟ್ಟು ಕಾಣಿಸಿಬಂತು ಹಿರಿದೇನು? ಕಿರಿದೇನು?
ನೆಟ್ಟನೆ ಸರ್ವಜ್ಞನೆನೆ ಕಾಣೊ ಮನುಜ

ಜಲವೆ ಸಕಲ ಕುಲಕೆ ತಾಯಿಯಲ್ಲವೆ
ಆ ಜಲದ ಕುಲವನೇನಾದರು ಬಲ್ಲಿರಾ?
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹ
ನೆಲೆಯನರಿತು ನೀ ಹರಿಯ ನೆನೆ ಮನುಜ

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿಕೇಶವರಾಯನ
ಚರಣಕಮಲವನು ಕೀರ್ತಿಸುವನೆ ಕುಲಜ

ಕುಲ ಕುಲ ಕುಲವೆಂದು ಹೊಡೆದಾಡದಿರಿ

5. ಒಲ್ಲೆನೆಂದರಾಗುವುದೆ
ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನು
ಎಲ್ಲವನುಂಡು ತೀರಿಸಬೇಕು ಮನವೆ

ತಂದೆ ತಾಯ ಬಸುರಿನಲಿ ಬಂದೆನಂದಿಗಿಂದಿಗೂ
ಒಂದಿಷ್ಟು ಸುಖವ ನಾ ಕಾಣೆ ಜೀವನವೆ
ಬಂದುದನೆಲ್ಲವನುಂಡು ತೀರಿಸಬೇಕು
ಭ್ರಮೆಯಿಂದ ಮನವೆನಿನಗೆ ಬಯಲಾಸೆಯೇಕೋ?

ಎಮ್ಮ ಅರ್ಥ ಎಮ್ಮ ಮನೆಯು ಎಮ್ಮ ಮಕ್ಕಳೆಂಬುವ
ಹಮ್ಮು ನಿನಗೆ ಏಕೋ ಹಗೆಯ ಜೀವನವೆ
ಬೊಮ್ಮ ಪಣೆಯಲಿ ಬರೆದ ಬರಹ ತಪ್ಪುವುದುಂಟೆ
ಸುಮ್ಮನೆ ಬಯಲಾಸೆ ವ್ಯರ್ಥಜೀವನವೆ

ಅಂತರಂಗದಲೊಂದು ಅರ್ಧ ದೇಹದಲೊಂದು
ಚಿಂತೆಯನುಗೊಳಲೇಕೊ ಪಂಚರಿವರಿರಲು
ಕಂತುಪಿತ ಕಾಗಿನೆಲೆಯಾದಿಕೇಶವ
ಲಕ್ಷ್ಮೀಕಾಂತ ತನ್ನಲ್ಲಿಗೆ ಕರೆಕಳುಹುವತನಕ

ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನು

6. ಆರು ಬಲ್ಲರು ಹರಿ-ಹರರ ಮಹಿಮೆಯನ್ನು
ಆರು ಬಲ್ಲರು ಹರಿ-ಹರರ ಮಹಿಮೆಯನ್ನು
ವಾರಿಜೋದ್ಭವ ಸುರೇಂದ್ರಾದಿಗಳವಲ್ಲ

ಪೌರತ್ರಯವ ಗೆಲುವ ಸಮಯದಲಿ ತಪಮಾಡಿ
ನಾರಾಯಣಾಸ್ತ್ರವನು ಪಡೆದನೀಶ
ಗೌರಿಮನೋಹರನ ಘನತರಾರ್ಚನೆಗೈದು
ಚಾರುತರ ಚಕ್ರವನು ಪಡೆದನಾ ಶೌರಿ

ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ
ಬಾಗಿಲ ಕಾಯ್ದನಚ್ಯುತನು ಅನುಗಾಲದಿ
ಬಲುಭುಜನ ಬಾಣಾಸುರನ ಗೃಹದ್ವಾರವನು
ಬಳಸಿ ಕಾಯ್ದನು ಹರನು ವರವ ತಾನಿತ್ತು

ಭೋಗಿಶಯನನು ಆಗಿ ಭೋಗಿಭೂಷಣನಾಗಿ
ವಾಗೀಶನಾಗಿ ಸ್ಥಿತಿಲಯಗಳಿಗೆ
ಆಗು ಕಾರಣಕರ್ತ ಕರ್ಮಾದಿ ರೂಪಕ್ಕೆ
ಕಾಗಿನೆಲೆಯಾದಿಕೇಶವನ ಮಹಿಮೆಯನು

ಆರು ಬಲ್ಲರು ಹರಿ-ಹರರ ಮಹಿಮೆಯನ್ನು

7. ಮರೆಯದಿರು ಮರೆಯದಿರು
ಮರೆಯದಿರು ಮರೆಯದಿರು ಮರುಳು ಮನುಜ
ನಾರಾಯಣನ ಸ್ಮರಣೆಯ ಮಾಡು ಮನುಜ

ರಂಗನಾಥನು ಇರಲಿಕ್ಕೆ ಜಂಗುಳಿ ದೈವಗಳೇಕೆ
ತುಂಗಭದ್ರೆ ಇರಲಿಕ್ಕೆ ಬಾವಿ ಕೆರೆಯೇಕೆ
ಅಂಗನೆ ಸತಿ ಇರಲಿಕ್ಕೆ ಬಣಗು ಹೆಣ್ಣುಗಳೇಕೆ
ಮಂಗಳಾತ್ಮನಿರಲಿಕ್ಕೆ ಪರದೈವವೇಕೆ

ಹಾಲು ಹಳ್ಳವಿರಲಿಕ್ಕೆ  ವಾಳಿಯವ ತರಲೇಕೆ
ಮೇಲುನಾಮವಿರಲಿಕ್ಕೆ ಕಟುಕು ಇನ್ನೇಕೆ
ಬಾಲ ಹನುಮನಿರಲಿಕ್ಕೆ ಹುಲುಕಪಿಗಳೇಕೆ
ಒಳ್ಳೆ ತುಳಸಿಯಿರೆ ಕಗ್ಗೊರಲೆಯೇಕೆ

ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆ
ರನ್ನ ಮಾಣಿಕ್ಯವಿರಲಿಕ್ಕೆ ಕಾಜಿನ ಹರಳೇಕೆ
ಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆ
ಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ

ಮರೆಯದಿರು ಮರೆಯದಿರು ಮರುಳು ಮನುಜ

8. ಬಾಗಿಲನು ತೆರೆದು ಸೇವೆಯನು
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ
ಕೂಗಿದರು ಧ್ವನಿ ಕೇಳಲಿಲ್ಲವೆ ನರಹರಿಯೆ

ಪರಮಪದದೊಳಗೆ ವಿಷಧರನ ತಲ್ಪದಲಿ
ನೀ ಸಿರಿಸಹಿತ ಕ್ಷೀರವಾರಿಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೇ

ಕಡುಕೋಪದಿಂ ಖಳನು ಖಡುಗವನು ಪಿಡಿದು
ನಿನ್ನೊಡೆಯನೆಲ್ಲಿಹನೆಂದು ನುಡೀಯೆ
ಧೃಢಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಬದಿಂದೊಡೆದೆ ನರಹರಿಯೆ

ಯಮಸುತನ ರಾಣಿಗಕ್ಷಯವಸವನಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿಕೇಶವನೆ

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ

9. ಗೋವಿಂದ ಹರಿ ಗೋವಿಂದ
ಗೋವಿಂದ ಹರಿ ಗೋವಿಂದ
ಗೋವಿಂದ ಕೇಶವ ಕೃಷ್ಣ ಜನಾರ್ಧನ

ಮತ್ಸ್ಯಾವತಾರದೊಳಾಡಿದನೆ
ಮಂದರಾಚಲ ಬೆನ್ನೊಳು ತಾಳಿದನೆ
ಅಚ್ಚಸೂಕರನಾಗಿ ಬಾಳಿದನೆ
ಮದಹಚ್ಚೆ ಹಿರಣ್ಯನ ಸೀಳಿದನೆ

ಕುಂಭಿನಿ ದಾನವ ಬೇಡಿದನೆ
ಕ್ಷಾತ್ರರೆಂಬವರನು ಹತಮಾಡಿದನೆ
ಅಂಬುಧಿಗೆ ಶರ ಹೂಡಿದನೆ
ಕಮಲಾಂಬಕ ಗೊಲ್ಲರೊಳಾಡಿದನೆ

ವಸುದೇವನುದರದಿ ಪುಟ್ಟಿದನೆ
ಪಲ್ ಮಸೆವ ದನುಜರೊಡೆಗುಟ್ಟಿದನೆ
ಎಸೆವ ಕಾಳಿಂಗನ ಮೆಟ್ಟಿದನೆ
ಬಾಧಿಸುವರ ಯಮಪುರಕಟ್ಟಿದನೆ

ಪೂತನಿಯ ಮೈಯ ಸೋಕಿದನೆ
ಮಹಾಘಾತದ ಮೊಲೆಯುಂಡು ತೇಗಿದನೆ
ಘಾತಕಿಯನತ್ತ ನೂಕಿದನೆ
ಗೋಪವ್ರಾತಗೋಗಳನೆಲ್ಲ ಸಾಕಿದನೆ

ಸಾಧಿಸಿ ತ್ರಿಪುರರ ಗೆಲಿದವನೆ
ಮ್ಲೇಚ್ಚರ  ಛೇಧಿಸಿ ಹಯವೇರಿ ಮೆರೆದವನೆ
ಸಾಧಿಸಿ ಸಕಲವ ತಿಳಿದವನೆ
ಬಾಡದಾದಿಕೇಶವ ಭಕ್ತಿಗೊಲಿದವನೆ

ಗೋವಿಂದ ಹರಿ ಗೋವಿಂದ

10. ಭಜಿಸಿ ಬದುಕೆಲೊ ಮನುಜ
ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀ ಹರಿಯ
ಅಜಸುರೇಂದ್ರಾದಿಗಳು ಆದಿವಂದಿತಪಾದ

ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ
ಕಾಕುಶಕಟನ ತುಳಿದು ಕೊಂದ ಪಾದ
ಲೋಕೇಶನಿಗೆ ಒಲಿದು ಪೂಜೆಗೊಂಬುವ ಪಾದ
ಲೋಕಪಾವನೆ ಗಂಗೆ ಜನಿಸಿದಾ ಪಾದ

ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಆದ
ಒಲಿದು ಪಾರ್ಥಗೆ ಧರೆಯನೊತ್ತಿದ ಪಾದ
ಕೊಲಿಸಿ ಕೌರವರ ಕಾಳಗದಿ ಕೆಡಹಿದ ಪಾದ
ಬಲಿದ ಕಾಳಿಂಗನನು ತುಳಿದ ಪಾದ

ಗರುಡ ಶೇಷಾದಿಗಳು ಪೊತ್ತು ಕೊಂಡಾಡಿಹ ಪಾದ
ಧರೆಯ ಈರಡಿ ಮಾಡಿ ಅಳೆದ ಪಾದ
ಸಿರಿ ತನ್ನ ತೊಡೆಯಮೇಲಿರಿಸಿ ಸೇವಿಪ ಪಾದ
ವರ ಕಾಗಿನೆಲೆಯಾದಿ ಕೇಶವನ ಪಾದ

ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀ ಹರಿಯ

11. ತನು ನಿನ್ನದು
ತನು ನಿನ್ನದು ಜೀವನ ನಿನ್ನದು ರಂಗ
ಅನುದಿನದಿಬಾಹ ಸುಖ ದು:ಖ ನಿನ್ನದಯ್ಯ

ಸವಿನುಡಿ ವೇದ ಪುರಾಣ ಶಾಸ್ತ್ರಂಗಳ
ಕಿವಿಯಿಂದ ಕೇಳುವ ಕಥೆ ನಿನ್ನದು
ನವಮೋಹನಾಂಗಿಯರ ರೂಪವ ಕಣ್ಣಿಂದ
ಎವೆಯಿಕ್ಕದೆಲೆ ನೋಡುವ ನೋಟ ನಿನ್ನದಯ್ಯ

ಒಡಗೂಡಿ ಗಂಧ ಕಸ್ತೂರಿ ಪರಿಮಳಗಳ
ಬಿಡದೆ ಲೇಪಿಸಿಕೊಂಬುದು ನಿನ್ನದು
ಪಡುರಸದನ್ನಕೆ ನಲಿದಾಡುವ ಚಿಹ್ನೆ
ಕಡುರುಚಿಗೊಂಡರಾರುಚಿ ನಿನ್ನದಯ್ಯ

ಮಾಯಪಾಶದ ಬಲೆಯೊಳಗೆ ಸಿಲುಕಿರುವಂಥ
ಕಾಯಪಂಚೇಂದ್ರಿಯಗಳು ನನ್ನವು
ನ್ಯಾಯದಿ ಕನಕನೊಡೆಯ ಆದಿಕೇಶವರಾಯ
ನೀನಲ್ಲದೆ ನರರು ಸ್ವತಂತರೆ

ತನು ನಿನ್ನದು ಜೀವನ ನಿನ್ನದು ರಂಗ

12. ಈತನೀಗ ವಾಸುದೇವನು
ಈತನೀಗ ವಾಸುದೇವನು
ಈತನೀಗ ವಾಸುದೇವ
ಈ ಸಮಸ್ತ ಭುವನದೊಡೆಯ
ದೂತಗೊಲಿದು ತೇರನೇರಿ
ಹಿತದಿ ತೇಜಿ ನಡೆಸಿದಾತ

ದನುಜೆಯಾಳ್ದನಣ್ಣನಣ್ಣನ
ಪಿತನ ಮುತ್ತಿ ಕೌರವೇಶನ
ಅನುಜೆಯನಾಳಿದನ ಶಿರವನ್ನು ಛೇಧಿಸಿ
ತನ್ನ ಅನುಜೆಯಾಳಿದನ ಬೆಂಕಿ ತಿನ್ನದಂತೆ ಕಾಯ್ದ
ರುಕ್ಮನನುಜೆಯಾಳಿದವನ ಮೂರ್ತಿಯನ್ನು ನೋಡಿರೊ

ವ್ಯೋಮಕೇಶನಿಪ್ಪ ದೆಸೆಯ
ನಾಲ್ಕು ಜಗಕೆ ತೋರುತಿಪ್ಪ
ಸಾಮಜವನ್ನೇರಿ ಬಪ್ಪನನ್ನು ಕಾಣುತ
ಪ್ರೇಮದಿಂದ ಉರದೊಳಾಂತು ಡಿಂಗರಿಂಗನನ್ನು ಕಾಯ್ದ
ಸೋಮಕುಲದ ಭಾರವನ್ನು ಪೊತ್ತ ದೇವನು

ಕ್ರೂರವಾದ ಫಣಿಪಬಾಣ
ಭೋರ್ಗುಡಿಸುತಿರಲು ಜಗಕೆ
ವೀರನನ್ನು ಮುಸುಕಿ ಬಪ್ಪುದನ್ನು ಕಾಣುತ
ಭೂರಮಣಿಯನೊತ್ತಿ ಅಡಿಗೆ ಬೀಗನ ಶಿರವನ್ನು ಕಾಯ್ದ
ಶ್ರೀರಮಣ ಆದಿಕೇಶವನನ್ನು ನೋಡಿರೋ

ಈತನೀಗ ವಾಸುದೇವನು

13. ಆರು ಹಿತವರು ಎಂದು
ಆರು ಹಿತವರು ಎಂದು ನಂಬಬೇಡ
ಆರಿಗಾರಿಲ್ಲ ಆಪತ್ತು ಬಂದೊದಗಿದೆಡೆ

ಜನಕ ಹಿತದವನೆಂದು ನಂಬಬಹುದೆ
ಹಿಂದೆ ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿ ರಕ್ಷಿಸುವಳೆಂತೆಂಬೆನೇ ಆಕುಂತಿ
ತನಯ ರಾಧೇಯನಿಗೆ ಎರಡನೆಣಿಸಿದ ಮೇಲೆ

ಮಗನು ತೆತ್ತಿಗನೆನೆಲೆ ಕಂಸ ತನ್ನಯ ಪಿತನ
ನಿಗಳಬಂಧನದಿಂದ ಬಂಧಿಸಿದನು
ಜಗವರಿಯೆ ಸೋದರನು ಮಮತೆಯುಳ್ಳವನೆನಲೆ
ಹಗೆವರಿಸಿ ವಾಲಿಯನು ಅನುಜ ಕೊಲಿಸಿದ ಮೇಲೆ

ತನಗೆ ದೇಹಾನುಬಂಧಿಗಳೆ ಬಂಧುಗಳೆಂದು
ಮನದಿ ನಿಚ್ಚಳವಾಗಿ ನಂಬಬೇಡ
ಘನಕೃಪಾನಿಧಿ ಕಾಗಿನೆಲೆಯಾದೆಇ ಕೇಶವನ
ಅನುದಿನದಿ ನಂಬಿದವಗಿಹಪರದ ಸುಖವು

ಆರು ಹಿತವರು ಎಂದು ನಂಬಬೇಡ

14. ಹೇಗಿದ್ದು ಹೇಗಾದೆಯೊ ಆತ್ಮ
ಹೇಗಿದ್ದು ಹೇಗಾದೆಯೊ ಆತ್ಮ
ಯೋಗೀಶಾನಂದ ಪುರದಲಿರುವುದ ಬಿಟ್ಟು

ಬಸಿರಹಳ್ಳಿಗೆ ಬಂದು ಮಾಸನೂರಲಿ ನಿಂದು
ಗುಸುಗಾಡಿ ನುಡಿದು ನೆಲಬಟ್ಟೆ ಪಿಡಿದು
ಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದು
ವಸುಧೆಯಲಿ ದಿನಗಳೆದೆಯೊ ಆತ್ಮ

ಎಳವರೆಯಲಾಡಿ ಯೌವ್ವನದ ಊರಿಗೆ ಬಂದು
ಧಳಧಳಿಪ ಹಸ್ತಾದ್ರಿ ನೆಳಲ ಸೇರಿ
ಅಳಲು ಸುತ ಬೆಳೆದು ದಾರಿದ್ರ್ಯ ಪೇಟೆಗೆ ಬಂದು
ಹಳೆಯ ಬೀಡಿಗೆ ಪಯಣವೊ ಆತ್ಮ

ಗನ್ನಗತಕದ ಮಾತು ಇನ್ನು ನಿನಗೇತಕೊ
ಮುನ್ನ ಮಾಡಿದ ಕರ್ಮಭರದೊಡಲಿದೆ
ಉನ್ನತದ ಕಾಗಿನೆಲೆಯಾದಿ ಕೇಶವನ
ಸುಪ್ರಸನ್ನ ಮೂರುತಿಯನ್ನು ಭಜಿಸೆಲೊ ಆತ್ಮ

ಹೇಗಿದ್ದು ಹೇಗಾದೆಯೊ ಆತ್ಮ

15. ನಾರಾಯಣ ನಿನ್ನ
ನಾರಾಯಣ ನಿನ್ನ ನಾಮವೊಂದಿರುತಿರೆ
ಬೇರೊಂದು ನಾಮವಿನ್ನೇತಕಯ್ಯಾ

ನೆಟ್ಟನ ದಾರಿಯ ಬಟ್ಟೆಯೊಳಿರುತಿರೆ
ಬೆಟ್ಟವ ಬಳಸಲಿನ್ನೇತಕಯ್ಯ
ಅಷ್ಟೈಶ್ವರ್ಯದ ಮೃಷ್ಟಾನ್ನವಿರುತಿರೆ
ಬಿಟ್ಟಿಕೂಳನು ತಿನ್ನಲೇತಕಯ್ಯ

ಪರಶುನೇವಾಳಂಗಳಿರುತಿರೆ ಬೀದಿಯ
ಬರಿಗಲ್ಲ ತೊಳೆಯಲಿನ್ನೇತಕಯ್ಯ
ಹರಿವಾಣದೊಳಗಮೃತಾನ್ನವು ಇರುತಿರೆ
ತಿರಿದ ಕೂಳನು ತಿನ್ನಲೇತಕಯ್ಯ

ಬೆಲ್ಲವು ಕರದೊಳಗಿರುತಿರೆ
ಕಾಡಿನ ಕಲ್ಲನು ಕಡಿಯಲಿನ್ನೇತಕಯ್ಯ
ಬಲ್ಲಿದ ಕಾಗಿನೆಲೆಯಾದಿಕೇಶವನಿರೆ
ಚಿಲ್ಲರೆ ದೈವದ ಹಂಬಲೇತಕಯ್ಯಾ

ನಾರಾಯಣ ನಿನ್ನ ನಾಮವೊಂದಿರುತಿರೆ

16. ಆರಿಗೆ ಆರಿಲ್ಲವಯ್ಯ
ಆರಿಗೆ ಆರಿಲ್ಲವಯ್ಯ ಆಪತ್ತು ಕಾಲಕೆ
ವಾರಿಜನಾಭನ ನೆನೆ ಮನವೆ

ಹಸಿದು ಬಳಲಿದಾಗ ಹಗೆಯ ಕೈಗೆ ಸಿಕ್ಕಾಗ
ದೆಸೆಗೆಟ್ಟು ಓಡುವಾಗ ವ್ಯಾಧಿಯೊಳಿದ್ದಾಗ
ಅಸಮಾನ ಬಂದಾಗ ಅತಿ ಭೀತಿಗೊಂಡಾಗ
ಬಿಸಜಾಕ್ಷನ ನಾಮವ ನೆನೆ ಮನವೆ

ಸಾಲದವರೊತ್ತಿದಾಗ ಚಾಡಿಮಾತಿಗೆ ಮೋಹಿಸಿ
ಗೋಳುಗೊಳಿಸುತ ಕೋಪದಲಿ ಇರುವಾಗ
ಮೇಲ ತಾನರಿಯದೆ ನಿಂದೆ ಹೊಂದಿರುವಾಗ
ನೀಲಮೇಘಶ್ಯಾಮನ ನಾಮವ ನೆನೆ ಮನವೆ

ಪಂಥಗಳನಾಡಿ ಕಳಬಂಟರಡ್ಡ ಕಟ್ಟಿದಾಗ
ದಂತಿ ಮದವೇರಿ ಬೆನ್ನಟ್ಟಿದಾಗ
ಚಿಂತೆಯೇತಕೆ ಕಾಗಿನೆಲೆಯಾದಿ ಕೇಶವನ
ನಿಶ್ಚಿಂತೆಯಲಿ ನೆನೆದು ಸುಖಿಯಾಗೊ ಮನವೆ

ಆರಿಗೆ ಆರಿಲ್ಲವಯ್ಯ ಆಪತ್ತು ಕಾಲಕೆ

17. ಆರು ಬಾಳಿದರೇನು
ಆರು ಬಾಳಿದರೇನು ಆರು ಬದುಕಿದರೇನು
ನಾರಾಯಣನ ಸ್ಮರಣೆ ನಮಗಿಲ್ಲದತನಕ

ಉಣ್ಣಬರದವರಲ್ಲಿ ಊರೂಟವಾದರೆ ಏನು
ಹಣ್ಣು ಬಿಡದ ಮರಗಳು ಹಾಳಾದರೇನು
ಕಣ್ಣೀಲ್ಲದವಗಿನ್ನು ಕನ್ನಡಿಯಿದ್ದು ಫಲವೇನು
ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು

ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನು
ಹೊಕ್ಕು ನಡೆಯದ ನಂಟತನದೊಳೇನು
ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು
ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು

ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನು
ಬಲ್ಪಂಥವಿಲ್ಲದವನ ಬಾಳ್ವೆಯೇನು
ಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನ
ಅಲ್ಪವೂ ನೆನೆಯದ ನರನಿದ್ದರೇನು

ಆರು ಬಾಳಿದರೇನು ಆರು ಬದುಕಿದರೇನು

18. ಹೂವ ತರುವರ ಮನೆಗೆ
ಹೂವ ತರುವರ ಮನೆಗೆ ಹುಲ್ಲ ತರುವ
ಆವ ಬಗೆಯಲಿ ಸಲಹೊ ದೇವ ಚಿನ್ಮಯನೆ

ರಂಗನಾಥ ನಿನ್ನಂಘ್ರಿಗೆರಗುವೆನೊ
ಅಂಗವನು ನಿನಗೆ ನಾ ಸಲಿಸುವೆನು
ರಂಗರೂಪವ ತೋರಿ ಭವಭಂಗಗಳನಳಿದು
ಡಂಗುರವ ಹೊಯ್ಯೊ ನಿನ್ನ ಡಿಂಗರಿಗನೆಂದು

ಈರೇಳು ಜನ್ಮದಿ ನಿನ್ನಾಧೀನನಾಗಿಪ್ಪೆ
ನಾನಾರ ಸೇರುವೆನೊ ನಾನೇನ ಮಾಡುವೆನೊ
ಘೋರ ಪಾತಕಿ ಅಜಮಿಳನ ಸಲಹಿದ ರಂಗ
ನಾರಸಿಂಹನೆಂದರೆ ಧ್ವನಿದೋರೋ ಕೃಷ್ಣ

ಇಷ್ಟು ಮಾಡಿದ ಬಂಟ ನಾ ನಿನ್ನ ವೈಷ್ಣವರ
ಪುಟ್ಟ ದಾಸಿಯಮಗನೊ ಪರದೇಸಿಯೊ
ಗಟ್ಟಿಯಾಗಿ ಕಾಗಿನೆಲೆಯಾದಿಕೇಶವ ರಂಗ
ಬಿಟ್ಟು ಹೋದರೆ ನಿನಗೆ ಹರಿದಾಸರಾಣೆ

ಹೂವ ತರುವರ ಮನೆಗೆ ಹುಲ್ಲ ತರುವ

19. ಬಲ್ಲವರು ಪೇಳಿರೈ
ಬಲ್ಲವರು ಪೇಳಿರೈ ಬಹುವಿಧದ ಚತುರತೆಯ
ಎಲ್ಲರಿಗು ಸಮ್ಮತವು ಏಕಾಂತವಲ್ಲ

ಕಂಕಣಕೆ ಮೊದಲೇನು ಕಾರ್ಮುಗಿಲ ಕಡೆಯೇನು
ಶಂಕರನ ಮೊಮ್ಮಗನ ಮುಖದ ಸಿರಿಯೇನು
ಪಂಕಜಕೆ ಕುರುಹೇನು ಪಾರ್ಥಿಯಳ ತಪವೇನು
ಅಂಕಿತಕೆ ಗುರುತೇನು ಅಜನ ಗುಣವೇನು

ಕಲಿಗಳಿಗೆ ಕಣ್ಣೇನು ಕಾವನಿರುಹಗಳೇನು
ಲಲನೆಯರ ಒಲಿಸುವ ಇದೇನು
ನೆಲಗಳಿಗೆ ಸಾಕ್ಷಿಯೇನು ನಾಯದ ಪರಿಯೇನು
ಬಲವ ನಿಲಿಸುವುದೇನು ಭಾಗ್ಯವು ಇದುಯೇನು

ಸತ್ಯಕ್ಕೆ ಕುರುಹೇನು ಪೃಥಿವಿಗೆ ಕಡೆಯೇನು
ಚಿತ್ತವನು ಸೆಳೆದೊಯ್ವ ಕಪಟವು ಇದೇನು
ಮರ್ತ್ಯದೊಳು ಕಾಗಿನೆಲೆಯದಿ ಕೇಶವನಂಘ್ರಿ
ಅರ್ತಿಯಿಂದಲಿ ಕೂಡಿದುದಕೆ ಫಲವೇನು

ಬಲ್ಲವರು ಪೇಳಿರೈ ಬಹುವಿಧದ ಚತುರತೆಯ

20. ನಾನು ನೀನೆನ್ನದಿರೋ
ನಾನು ನೀನು ಎನ್ನದಿರೊ ಹೀನ ಮಾನವ
ಜ್ಞಾನದಿಂದ ನಿನ್ನ ನೀನೇ ತಿಳಿದುನೋಡೆಲೊ ಪ್ರಾಣಿ

ಹೆಣ್ಣು ಹೊನ್ನು ಮಣ್ಣು ಮೂರ್ ನಿನ್ನವೇನೆಲೊ
ಅನ್ನದಿಂದ ಬಂದ ಕಾಮ ನಿನ್ನದೇನೆಲೊ
ಕರ್ಣದಿಂದ ಬರುವ ಘೋಷ ನಿನ್ನದೇನೆಲೊ
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ

ಹಲವು ಜನ್ಮದಿಂದ ಬಂದಿರುವನು ನೀನೆಲೊ
ಮಲದ ಗರ್ಭದಲಿ ನಿಂದಿರುವನು ನೀನೆಲೊ
ಜಲದ ದಾರಿಯಲಿ ಬಂದಿರುವನು ನೀನೆಲೊ
ಕುಲವು ಜಾತಿ ಗೋತ್ರಗಳುಳ್ಳವನು ನೀನೆಲೊ

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೊ
ಜಾಲವಿದ್ಯೆ ಬಯಲುಮಾಯೆ ನಿನ್ನದೇನೆಲೊ
ಕೀಲು ಜಡಿದ ಮರದ ಬೊಂಬೆ ನಿನ್ನದೇನೆಲೊ
ಲೋಲ ಆದಿಕೇಶವನ ಭಕ್ತನಾಗೆಲೊ

ನಾನು ನೀನು ಎನ್ನದಿರೊ ಹೀನ ಮಾನವ

21. ಸತ್ಯವಂತರ ಸಂಗವಿರಲು
ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ

22. ದಾಸದಾಸರ ಮನೆಯ ದಾಸಾನುದಾಸ ನಾನು
ದಾಸದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ

ಕಾಳುದಾಸರ ಮನೆಯ ಆಳು ದಾಸ ನಾನಯ್ಯ
ಕೀಳುದಾಸನು ನಾನು ಕಿರಿಯ ದಾಸ
ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ
ಆಳಿನ ಆಳಿನ ಆಳಿನಡಿದಾಸ ನಾನು

ಪಂಕಜನಾಭನ ಮನೆಯ ಮುಂಕುದಾಸನಯ್ಯ
ಕೊಂಕುದಾಸನು ನಾನು ಕುರುಡು ದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಂಕದ ಬಾಗಿಲ ಕಾಯ್ವ ಬಡದಾಸ ನಾನು

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುನ್ನಿದಾಸ
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ
ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ

ದಾಸದಾಸರ ಮನೆಯ ದಾಸಾನುದಾಸ ನಾನು

23. ವರವ ಕೊಡು ಎನಗೆ ವಾಗ್ದೇವಿ
ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ ಕಮಲಂಗಳ ದಯಮಾಡು ದೇವಿ

ಶಶಿ ಮುಖದ ನಸು ನಗೆಯ ಬಾಲೆ
ಎಸೆವ ಕರ್ಣದ ಮುತ್ತಿನ ಓಲೆ
ನಸುವ ಸುಪಲ್ಲ ಗುಣಶೀಲ ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು

ಇಂಪು ಸೊಂಪಿನ ಚಂದ್ರ ಬಿಂಬೆ
ಕೆಂಪು ತುಟಿ ನಾಸಿಕದ ರಂಭೆ
ಜೋಂಪು ಮದನನ ಪೂರ್ಣ ಶಕ್ತಿ ಗೊಂಬೆ
ಸಂಪಿಗೆಯ ಮುಡಿದಿಟ್ಟ ವಿದ್ಯಾ

ರವಿ ಕೋಟಿ ತೇಜ ಪ್ರಕಾಶೇ ಮಹಾ
ಕವಿಜನ ಹೃತ್ಕಮಲ ವಾಸೇ
ಅವಿರಳ ಪುರಿ ಕಾಗಿನೆಲೆಯಾದಿ
ಕೇಶವನ ಸುತನಿಗೆ ಸನ್ನುತ ರಾಣಿವಾಸೆ

24. ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೇ

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

25. ಯಾದವರಾಯ ಬೃಂದಾವನದೊಳು
ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇಅನುಪಲ್ಲವಿ

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆಚರಣ

ಕರುಗಳ ಸಹಿತಲೇ ಗೋಕುಲವೆಲ್ಲಸಿರಿ
ಕಾಗಿನೆಲೆಯಾದಿ ಕೇಶವ ರಾಯ
ತರುಗಳ ಸಹಿತಲೇ ವರಗೋಪಾಲಚರಣ

ಯಾದವರಾಯ ಬೃಂದಾವನದೊಳು





ಕೃಪೆ : ವಾಟ್ಸ್ ಆಪ್

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು