ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

10.3.17

ದಲಿತ ವಚನಕಾರರ ಜಯಂತಿ

*ದಲಿತ ವಚನಕಾರರ ಕುರಿತಾದ ಸಂಕ್ಷಿಪ್ತ ಮಾಹಿತಿ*👇
*ದಲಿತ ವಚನಕಾರರ ಜಯಂತಿ*
*ಮಾರ್ಚ್ 10 2017*

12ನೇ ಶತಮಾನದ ಕಲ್ಯಾಣ ಕ್ರಾಂತಿಯು ಸಮಾಜ ಪರಿವರ್ತನೆಯ ಕಾಲಘಟ್ಟವಾಗಿತ್ತು. ಬಸವಾದಿ ಶರಣರು ಹಾಗೂ ಹಲವಾರು ದಲಿತ ವಚನಕಾರರು ಸಮಾಜಕ್ಕೆ ಪೂರಕವಾದ ಮತ್ತು ಸಮಾನತೆ ಸಾರುವ ಅನೇಕ ವಚನಗಳನ್ನು ರಚಿಸಿದರು .

*ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯಾ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಪರಿಣಾಮಕಾರಿಯಾದ ಹಲವು ವಚನಗಳನ್ನು ರಚಿಸಿದರು*

ಹಲವು ಮೂಢನಂಬಿಕೆಗಳು ಮತ್ತು ಅಸಮಾನತೆಯಿಂದ ಕೂಡಿದ್ದ ಸಮಾಜದಲ್ಲಿ ಎಲ್ಲ ವರ್ಗದ ಜನರು ಶಾಂತಿಯಿಂದ ಬದುಕಲು ನೆರವಾಗುವ ಉದ್ದೇಶದಿಂದ *ವಚನಗಳ ಮೂಲಕ ಸಮಾಜ ಸುಧಾರಣೆ ಮಾಡುವ ಕೆಲಸನವನ್ನು ವಚನಕಾರರು ಮಾಡಿದ್ದಾರೆ. ಕಾಯಕವೇ ಕೈಲಾಸ ಎಂದು ನಂಬಿದ್ದ ಅವರು, ವಚನಗಳ ಮೂಲಕ ಜನರ ಭಾವನೆಗಳಿಗೆ ಸ್ಪಂದಿಸಿ, ಸಮಾನತೆ ಸಾರುವ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ*.

ರಾಜ್ಯ ಸರ್ಕಾರ ಇಂತಹ ಹಲವಾರು ಶರಣರು, ವಚನಕಾರರು ಹಾಗೂ ಸಮಾನತೆಗಾಗಿ ಶ್ರಮಿಸಿದವರಿಗೆ ಗೌರವ ನೀಡುವ ಉದ್ದೇಶದಿಂದ ಜಯಂತ್ಯುತ್ಸವ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದು, ಎಲ್ಲ ಸಮುದಾಯದ ಜನರಿಗೆ ಗೌರವ ನೀಡುವ ಕ್ರಮವಾಗಿದೆ .
*ಮಾದಾರ ಚನ್ನಯ್ಯ*

ಹನ್ನೇರಡನೆಯ ಶತಮಾನದ ಶರಣರಲ್ಲಿ ಮಾದಾರ ಚೆನ್ನಯ್ಯ ಬಹು ಮುಖ್ಯನಾದ ವ್ಯಕ್ತಿ. ಸತ್ಯಶುದ್ಧ ಕಾಯಕಕ್ಕೆ ಹೆಸರಾದವನು. ಜಾತಿಯಿಂದ ಆತ ಅಂತ್ಯಜ: ಅಂದರೆ ಮಾದಿಗ ಜಾತಿಯವನು. ತಮಿಳುನಾಡಿನ ಚೋಳರಾಜನ ಅರಮನೆಯ ಲಾಯಕ್ಕೆ ಹುಲ್ಲುತರುವ ಕೆಲಸಮಾಡುತ್ತಿದ್ದ ಅನಂತರ ಆತ ಬಸವಾದಿ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾಗಿ ಕಲ್ಯಾಣಕ್ಕೆ ಬಂದನು. ಅಲ್ಲಿ ತನ್ನ ಕುಲದ ಕಾಯಕವಾದ ಚರ್ಮಗಾರಿಕೆಯನ್ನು ಮುಂದುವರಿಸಿದರು. ದೇವನಿಗೆ ಅಂಬಲಿ ಉಣಿಸಿದ ಪ್ರಸಂಗ ಅವನ ಉಜ್ವಲ ಭಕ್ತಿಗೆ ಉದಾಹರಣೆ. ಬಸವಣ್ಣನವರು ಮಾದಾರ ಚೆನ್ನಯ್ಯನನ್ನು ಹೃದಯಾಂತರಾಳದಿಂದ ಸ್ತುತಿಸಿದ್ದಾರೆ.
*ಮಾದಾರ ಚೆನ್ನಯ್ಯ ಶ್ರೇಷ್ಟವಚನಕಾರ*. ಚೆನ್ನಯ್ಯನು ತನ್ನ ವಚನಗಳಲ್ಲಿ ಯಾವುದೇ ಅಂಕಿತವನ್ನು ಬಳಸಿಕೊಂಡಿಲ್ಲ. ತನ್ನ ಕಾಯಕದಲ್ಲಿ ಬಳಸುವ ಕೈ ಉಳಿ ಅಡಿಗೂಟ ಮೊದಲಾದವನ್ನೇ ಬಳಸಿ *"ಅರಿ ನಿಜಾತ್ಮರಾಮನ ರಾಮನ"* ಎಂದಿದ್ದಾನೆ, ಅವರ ೧೦ ವಚನಗಳು ದೊರಕಿವೆ. ನಡೆದಂತೆ ನುಡಿಯುವುದು ನುಡಿದಂತೆ ನಡೆಯುವುದು ಎಂಬ ಶರಣರ ಧ್ಯೇಯ ವಾಕ್ಯಕ್ಕೆ ಒಳ್ಳೆಯ ಉದಾಹರಣೆ ಮಾದಾರ ಚೆನ್ನಯ್ಯ. ಅವನ ವಚನವೊಂದರಲ್ಲಿ ಈ ರೀತಿ ಹೇಳಿದ್ದಾನೆ:

ವೇದ ಶಾಸ್ತ್ರಕ್ಕೆ ಹಾರುವನಾಗಿ, ವೀರ ವಿತರಣಕ್ಕೆ ಕ್ಷತ್ರಿಯನಾಗಿ
ಸರ್ವವನಾರೈದು ನೋಡುವಲ್ಲಿ ವೈಶ್ಯನಾಗಿ ವ್ಯಾಪಾರದೊಳಗಾಗಿ
ಕೃಷಿಯ ಮಾಡುವುದಕ್ಕೆ ಶೂದ್ರನಾಗಿ ಇಂತೀ ಜಾತಿ ಗೋತ್ರದೊಳಗಾಗಿ
ನೀಚ, ಶ್ರೇಷ್ಠವೆಂಬ ಎರಡು ಕುಲವಲ್ಲದೆ ಹೊಲೆ ಹದಿನೆಂಟು
ಜಾತಿಯೆಂಬ ಕುಲವಿಲ್ಲ. ಬ್ರಹ್ಮವನರಿದಲ್ಲಿ ಬ್ರಾಹ್ಮಣ
ಸರ್ವ ಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ, ಈ ಉಭಯವ
ನರಿದು ಮರೆಯಲಿಲ್ಲ ಕೈಯುಳಿಗತ್ತಿ ಆಡಿಗೂಂಟಕ್ಕಡಿಯಾಗಬೇಡ
ಅರಿ ನಿಜಾತ್ಮರಾಮ ರಾಮನಾ.

ಶ್ರೇಣಿಕೃತ ಸಮಾಜವ್ಯವಸ್ಥೆಯನ್ನು ವಿಡಂಬಿಸಿ ಮತ್ತೊಂದು ವಚನದಲ್ಲಿ ಹಿಗೆಂದಿದ್ದಾನೆ:


ನಡೆನುಡಿ ಸಿದ್ಧಾಂತವಾದಲ್ಲಿ  ಹೊಲೆ ಸೂತಕವಿಲ್ಲ
ನುಡಿ ಲೇಸು ನಡೆಯಧರ್ಮ
ಅದು ಬಿಡುಗದೆಯಿಲ್ಲದ ಹೊಲೆ
ಕಳವು ಪಾರದ್ವಾರಗಳಲ್ಲಿ ಹೊಲಬನರಿಯದೆ
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೇ ಕುಲ, ಅನಾಚಾರವೆ ಹೊಲೆ, ಇಂತೀ ಉಭಯವ
ತಿಳಿದರಿಯಬೇಕು ಕೈಯುಳಿಗತ್ತಿ, ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮರಾಮ ರಾಮನಾ.
*ಉರಿಲಿಂಗ ಪೆದ್ದಿ*

ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ' ಆಂಕಿತದಲ್ಲಿ ಈತ ರಚಿಸಿದ ೩೬೬ ವಚನಗಳು ದೊರೆತಿವೆ. ಅವುಗಳಲ್ಲಿ ಗುರುಮಹಿಮೆಗೆ ಅಗ್ರಸ್ಥಾನ ಸಂದಿದೆ. ಜೊತೆಗೆ ಲಿಂಗ-ಜಂಗಮ ತತ್ವದ ವಿಚಾರ, ಕುಲ-ಜಾತಿ ಸಮಸ್ಯೆ ನಿರೊಪಿತವಾಗಿವೆ. ವಚನಗಳ ಮಧ್ಯದಲ್ಲಿ ಬಳಸಿದ ಹೇರಳ ಸಂಸ್ಕೃತ ಉದ್ಧರಣೆಗಳು ಈತನ ಪಾಂಡಿತ್ಯಕ್ಕೆ ನಿದರ್ಶನವೆನಿಸಿವೆ. ಧರ್ಮ ಹಾಗೂ ಧರ್ಮದ ತತ್ವ, ಆಚರಣೆಗಳ ಪ್ರಚಾರ ಇವನ ವಚನಗಳ ಪ್ರಧಾನ ಆಶಯ. ವಚನಗಳ ನಡುವೆ ಬಳಸುವ ಯಥೇಚ್ಛ ಸಂಸ್ಕೃತ ಶ್ಲೋಕಗಳ ಆಧಾರದಿಂದ ಈತ ದೊಡ್ಡ ಜ್ಞಾನಿ ಎಂದು ಹೇಳಬಹುದು. ಹುಟ್ಟಿನಲ್ಲಿ ಅಂತ್ಯಜನಾಗಿ ಗುರುಪೀಠವನ್ನೇರಿದ ಸಂಗತಿ ಕ್ರಾಂತಿಕಾರಕವಾದುದು. ಈತನಲ್ಲಿ ಸಾಮಾಜಿಕ ವಿಡಂಬನೆ ತೀಕ್ಷ್ಣವಾಗಿದೆ. ತನಗೆ ಸರಿಕಾಣದ್ದನ್ನು ಮುಚ್ಚು ಮರೆಯಿಲ್ಲದೆ ಟೀಕಿಸಿರುವನು. ಇವನಲ್ಲಿ ವೈಚಾರಿಕತೆ ಪ್ರಧಾನವಾಗಿದೆ.
*ಡೋಹರ ಕಕ್ಕಯ್ಯ*

ಹನ್ನೆರಡನೇ ಶತಮಾನದ ಕರ್ನಾಟಕದ ಕಲ್ಯಾಣವು ಮಾನವಹಿತಸಾಧನೆಯ ಕಾರ್ಯಕ್ಷೇತ್ರವಾಗಿತ್ತು. ಬಸವಾದಿ ಶರಣರು ಮನುಕುಲೋದ್ಧಾರದ  ಮಹಾಮಣಿಹದಲ್ಲಿ ತೊಡಗಿದ್ದರು. ಇದರ ಕೀರ್ತಿ ಎಲ್ಲ ಕಡೆ ಹಬ್ಬಿತು. ದೇಶದ ನಾನಾ ಕಡೆಯಿಂದ ಜನರು ಕಲ್ಯಾಣ ಪಟ್ಟಣಕ್ಕೆ ಬಂದು ಸೇರಿದರು. ಕಾಶ್ಮೀರದಿಂದ ಮಹದೇವ ಭೂಪಾಲ, ಅಫಘಾನಿಸ್ತಾನದಿಂದ ಮರುಳ ಶಂಕರದೇವ. ಸೌರಾಷ್ಟ್ರದಿಂದ ಆದಯ್ಯ, ಮಾಳವ ದೇಶದಿಂದ ಕಕ್ಕಯ್ಯ ಬಂದರು.

ಕಕ್ಕಯ್ಯ ಚಂಡಾಲರಲ್ಲಿ ಒಂದು ಪಂಗಡವಾದ ಡೋಹರ ಪಂಗಡಕ್ಕೆ ಸೇರಿದವರು. ಚರ್ಮ ಹದ ಮಾಡುವುದು ಆತನ ವೃತ್ತಿ. ಆತ ಬಸವಣ್ಣನೇ ಮೊದಲಾದ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾದ. ಆತ ಲಿಂಗದೀಕ್ಷೆಯನ್ನು ಹೊಂದಿ ತನ್ನ ಆಚಾರ ಸಂಪನ್ನತೆಯಿಂದ ವೀರ ಮಹೇಶ್ವರನೆಂಬ ಅಗ್ಗಳಿಕೆಗೆ ಪಾತ್ರನಾದನು. ಬಸವಣ್ಣನವರು ಕಕ್ಕಯ್ಯನ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಕಕ್ಕಯ್ಯನ ಪ್ರಸಾದಕ್ಕಾಗಿ ಹಾತೊರೆದರು.

೯೮೬
ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿ
ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ!
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ!
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ,
ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ!
ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ
ಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದ
ಸಂಗನ ಬಸವಣ್ಣನ ಕರುಣದಿಂದ
ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ!
ಅಭಿನವ ಮಲ್ಲಿಕಾರ್ಜುನಾ.

*ಶರಣ ಕಕ್ಕಯ್ಯ ಇಷ್ಟಲಿಂಗನಿಷ್ಟ, ಆಚಾರ ಸಂಪನ್ನ, ಜೊತೆಗೆ ಆತ ಗಣಾಚಾರಿ. ಶಿವನಿಂದೆ ಕೇಳದ ನಿಷ್ಠೆ. ಲಿಂಗವನ್ನು ಕಲ್ಲೆಂದವನನ್ನು ಶಿಕ್ಷಿಸಲೂ ಆತ ಹಿಂಜರಿಯಲಿಲ್ಲ. ಕೀಳು ಕುಲದಲ್ಲಿ ಹುಟ್ಟಿದ ತನ್ನನ್ನು ದೀಕ್ಷೆಯ ಮೂಲಕ ಪಾವನ ಮಾಡಿದ್ದನ್ನು ಆತ ಕೃತಜ್ಞತೆಯಿಂದ ನೆನೆದಿದ್ದಾನೆ*

*ಡೋಹರ ಕಕ್ಕಯ್ಯ ಅನುಭವ ಮಂಟಪದಲ್ಲಿ ಪಾಲ್ಗೊಂಡು* ಶರಣರೊಡನಾಡಿ ಅನುಭಾವ ಸಂಪನ್ನನೆನಿಸಿದನು. ಆತನು ವಚನಗಳನ್ನು ರಚಿಸಿದ್ದಾನೆ. ಆತನ ಆರು ವಚನಗಳು
*ಸಂಗ್ರಹ*
 *ಮಹಾನ್ ಶರಣ ಸಮಗಾರ ಹರಳಯ್ಯ*

‘ದವನದ ಹುಣ್ಣಿಮೆ ದಿನ ಬಂತೋ,
ಧರೆ ದೇವ ಹರಳಯ್ಯ ಧರೆಗೆ ಬಂದಾನೋ’
ಜನಪದದಲ್ಲಿ ಶರಣ ಹರಳಯ್ಯನ ಜನನವನ್ನು ಈ ರೀತಿ  ಪದ ಕಟ್ಟಿ ಹಾಡುತ್ತಾರೆ. ಯಾವ ವ್ಯಕ್ತಿ ಸಮಾಜಕ್ಕೆ ಜೀವನವನ್ನು ಕಾಣಿಕೆಯಾಗಿ ನೀಡುತ್ತಾನೋ ಆತನೇ ಮಹಾತ್ಮ ಎನ್ನಲಿಕ್ಕೆ ಶರಣ ಹರಳಯ್ಯ ಆದರ್ಶಪ್ರಾಯ. 12ನೇ ಶತಮಾನದಲ್ಲಿ ಬಸವಾದಿ ಶರಣರ ಸಾಲಿನಲ್ಲಿ ಅತ್ಯಂತ ಹಿರಿಯ ಮತ್ತು ಸಮರ್ಥ ಸಿದ್ಧಿಯೋಗಿ ಸಂಕಲ್ಪ ಸಾಧಕ ಶರಣನೆನಿಸಿಕೊಂಡ ಸಮಗಾರ ಹರಳಯ್ಯ ಬಸವಧರ್ಮವನ್ನು ಎತ್ತಿ ಹಿಡಿದು ಮಹಾಮಾನವತಾವಾದಿ ಶರಣಾದರು.

ಅವರು ಪಾರಪಯ್ಯ, ಹೊನ್ನಮ್ಮ ದಂಪತಿಗೆ ದವನದ ಹುಣ್ಣಿಮೆಯಂದು ವಿಜಾಪುರ ಜಿಲ್ಲೆಯ ಕಲಿಗೂಡು ಎಂಬಲ್ಲಿ  ಜನಿಸಿದರು. ಆ ಮನೆತನ ಇಂದಿಗೂ ಹರಳಯ್ಯನ ಮಠ ಎಂದು ಗುರುತಿಸಲ್ಪಡುತ್ತದೆ. ಹರಳಯ್ಯನವರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ್ದಾರೆ ಬಾಯಿಂದ ಬಂದ ಮಾತು ದಿಟವಾಗುವಂಥ ಮಹಾನ್ ಚೇತನಾ ಶಕ್ತಿ ಶರಣ ಹರಳಯ್ಯನದಾಗಿತ್ತು ಎಂಬ ಸಂಗತಿ ಜನಪದ ಗೀತೆಗಳಲ್ಲಿ ಸಿಕ್ಕುತ್ತದೆ.

  ಬಸವಕಲ್ಯಾಣ ಸೇರುವ ಪೂರ್ವದಲ್ಲಿಯೇ ಹರಳಯ್ಯ ಸಾತ್ವಿಕ ಶರಣರಾಗಿದ್ದರು. ಇಡೀ ಬಡಾವಣೆಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಮಳೆ ತರಿಸಿದ್ದರು, ತನ್ನ ಪ್ರದೇಶದ ರಾಜನಿಗೆ ಹಾವು ಕಚ್ಚಿದಾಗ ತಮ್ಮ ಶಕ್ತಿಯಿಂದ ಬದುಕುಳಿಯುವಂತೆ ಮಾಡಿದ್ದರು ಎಂಬ ಅನೇಕ ಪವಾಡ ಕಥೆಗಳಿವೆ. ಲೋಕ ಕಲ್ಯಾಣಕ್ಕಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಸಂಚಾರ ಮಾಡಿ ಅವರು ಸ್ಥಾಪಿಸಿದ 34 ಕೇಂದ್ರಗಳು ಇಂದು ಪವಾಡ ಕ್ಷೇತ್ರಗಳಾಗಿವೆ. ಹರಳ ಪೂಜೆಯ ಫಲವಾಗಿ ಜನಿಸಿದ ಶರಣನೇ ಹರಳಯ್ಯ ಎಂದು
*ಸಂಗ್ರಹ*
*ದಲಿತ ವಚನಕಾರರ  ಜಯಂತಿ ಮಾರ್ಚ್ 10-2017*
 ಆ ಮಹಾನ ವಚನಕಾರರ
ಕುರಿತಾದ ಸಂಕ್ಷಿಪ್ತ ಮಾಹಿತಿ👆🏼👆🏼👆🏼🙏🏼🙏🏼

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು