22.7.16

*ಶಿಕ್ಷಕರ ನೇಮಕ, ವರ್ಗಾವಣೆ ಇನ್ನು ಜಿಲ್ಲಾ ಮಟ್ಟಕ್ಕೆ ಸೀಮಿತ*

*ಶಿಕ್ಷಕರ ನೇಮಕ, ವರ್ಗಾವಣೆ ಇನ್ನು ಜಿಲ್ಲಾ ಮಟ್ಟಕ್ಕೆ ಸೀಮಿತ*

ನೂತನ ತಿದ್ದುಪಡಿ ಪ್ರಸ್ತಾವನೆ ಮುಂದಿನ ವರ್ಷ ಜಾರಿ

ನೇಮಕಗೊಂಡ ಜಿಲ್ಲೆಯಲ್ಲೇ ನಿವೃತ್ತಿ
ಅನ್ಯ ಜಿಲ್ಲೆಗಳಿಗೆ ವರ್ಗಾವಣೆ ಪಡೆಯುವುದು ಇನ್ನು ಅಸಾಧ್ಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬಹುನಿರೀಕ್ಷಿತ ವರ್ಗಾವಣೆ ಕಾಯ್ದೆ ತಿದ್ದುಪಡಿ ನೆಪದಲ್ಲಿ ರಾಜ್ಯ ಸರ್ಕಾರ ಶಿಕ್ಷಕ ಸಮುದಾಯವನ್ನು ಬೆಂಕಿಯಿಂದ ಬಾಣಲಿಗೆ ದೂಡಿತೇ ಎಂಬ ಅನುಮಾನ ಮೂಡಿದೆ.
ಹಲವು ನ್ಯೂನತೆಗಳಿದ್ದ 2007ರ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರ, ವರ್ಗಾವಣೆ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಜಿಲ್ಲಾ ಮಟ್ಟದಲ್ಲೇ ನಡೆಸಿ, ಶಿಕ್ಷಕರು ನೇಮಕಗೊಳ್ಳುವ ಜಿಲ್ಲೆಯಲ್ಲೇ ನಿವೃತ್ತಿ ಅಗಬೇಕೆಂಬ ನಿಯಮ ಜಾರಿಗೆ ತರಲು ಹೊರಟಿದೆ. ಆದರೆ, ಇದು ಅತಾರ್ಕಿಕ ಮತ್ತು ಅವೈಜ್ಞಾನಿಕ ಎಂಬುದು ಶಿಕ್ಷಕ ಸಮುದಾಯದ ಆಕ್ಷೇಪ.

ಸರ್ಕಾರದ ಈ ಪ್ರಸ್ತಾವಿತ ಹೊಸ
ತಿದ್ದುಪಡಿ 2017ನೇ ಸಾಲಿನಿಂದ ಜಾರಿಗೆ ಬರಬೇಕಿದೆ. ಹೊಸ ವರ್ಗಾವಣೆ ನೀತಿಯ ಅತಿದೊಡ್ಡ ಲೋಪವೆಂದರೆ ಶಿಕ್ಷಕರು ತಾವು ನೇಮಕವಾಗಿರುವ ಜಿಲ್ಲೆಯಿಂದ ಅದೆಂಥಾ ಗಂಭೀರ ಕಾರಣಗಳಿದ್ದರೂ ಅನ್ಯ ಜಿಲ್ಲೆಗಳಿಗೆ ವರ್ಗ ಪಡೆಯಲು ಸಾಧ್ಯವಾಗುವುದೇ ಇಲ್ಲ.
ಇದೊಂದು ರೀತಿ ಈಗಾಗಲೇ ನೊಂದಿರುವ ಶಿಕ್ಷಕರನ್ನು ಬೆಂಕಿಯಿಂದ ಬಾಣಲೆಗೆ ದೂಡುವ ಯೋಜನೆಯಂತೆ ಭಾಸವಾಗುತ್ತಿದೆ. ಒಟ್ಟಿನಲ್ಲಿ ಪರ ಊರಿಗೆ ವರ್ಗಾವಣೆ ಬಯಸುವುದಿರಲಿ, ಶಿಕ್ಷಕರಾಗುವುದೇ ತಪ್ಪು ಎಂಬ ಭಾವನೆ ಬಂದರೂ ಆಶ್ಚರ್ಯವಿಲ್ಲ. 2007ರಲ್ಲಿ ಜಾರಿಗೆ ತಂದಿದ್ದ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮದಲ್ಲೇ ಸಾಕಷ್ಟು ಗೊಂದಲಗಳಿದ್ದವು. ಇದನ್ನು ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದರು. ಈ ಹಿಂದಿನ ಕಾಯ್ದೆ ಜಾರಿಗೆ ತಂದಾಗ ನಾನು ಇರಲಿಲ್ಲ. ಹಳೇ ಕಾಯ್ದೆಗೆ ತಿದ್ದುಪಡಿ ತಂದು ಶಿಕ್ಷಕರ ಹಿತ ಕಾಯುತ್ತೇನೆ ಎಂದು ಹಲವು ಬಾರಿ ಹೇಳಿದ್ದರು. ಆದರೆ, ಇದೀಗ ಜಿಲ್ಲೆಯನ್ನೇ ಘಟಕವನ್ನಾಗಿ ಪರಿವರ್ತಿಸುವ ಮೂಲಕ ಶಿಕ್ಷಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಲಿದೆ.
ಹೊಸ ನೀತಿಯಿಂದಾಗಿ ಶಿಕ್ಷಕ ದಂಪತಿ ಒಂದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ರಾಮನಗರದಲ್ಲಿ ರುವ ಶಿಕ್ಷಕನೊಬ್ಬ ಅದೇ ಜಿಲ್ಲೆಯಲ್ಲಿರುವ ಬೇರೆ ತಾಲೂಕುಗಳಿಗೆ ವರ್ಗಾವಣೆ ಪಡೆಯಬಹುದೇ ವಿನಹ ಬೇರೆ ಯಾವ ಜಿಲ್ಲೆಗೂ ಹೋಗಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಹುಬ್ಬಳ್ಳಿಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡ ಯುವತಿ ಅದೇ ಜಿಲ್ಲೆಯವರನ್ನು ಮದುವೆಯಾದರೆ ಬಚಾವ್. ಒಂದು ವೇಳೆ ಬೆಂಗಳೂರಿನ ಹುಡುಗನನ್ನು ಮದುವೆಯಾಗಬೇಕೆಂದರೆ ಕೆಲಸವನ್ನೇ ಬಿಡಬೇಕು ಇಲ್ಲವೇ, ಗಂಡನನ್ನೇ ಹುಬ್ಬಳ್ಳಿಗೆ ಕರೆಸಿಕೊಳ್ಳಬೇಕು. ಯಾಕೆಂದರೆ, ಆಕೆಗಂತೂ ವರ್ಗಾವಣೆ ಸಿಗುವುದಿಲ್ಲ. ಇಷ್ಟು ವರ್ಷ ಘಟಕದ ಒಳಗೆ ವರ್ಗ ಬಯಸಿದಲ್ಲಿ ಶೇ.5 ಮತ್ತು ಘಟಕದಿಂದ ಹೊರಗೆ ಶೇ.3 ಮೀಸಲಾತಿ ನೀಡಲಾಗುತ್ತಿತ್ತು. ಇದರಿಂದ ಕಳೆದ ವರ್ಷ 1357 ಪ್ರಾಥಮಿಕ ಮತ್ತು 404 ಪ್ರೌಢಶಾಲಾ ಶಿಕ್ಷಕರು ಘಟಕದ ಹೊರಗಿನ ವರ್ಗಾವಣೆಯ ಲಾಭ ಪಡೆದುಕೊಂಡಿದ್ದರು. ಸದ್ಯ ಜಾರಿಗೆ ತರಲು ಹೊರಟಿರುವ ಈ ಜಿಲ್ಲಾ ನಿವೃತ್ತಿ ಯೋಜನೆ 2017ರ ಸಾಲಿನಿಂದಲೇ ಅನ್ವಯವಾಗಲಿದ್ದು, ಪ್ರಸಕ್ತ ವರ್ಷ ಸದ್ಯ ಜಾರಿಯಲ್ಲಿರುವ ಕಾನೂನಿನಂತೆಯೇ ವರ್ಗಾವಣೆ ನಡೆಯಲಿದೆ.  ರಾಜ್ಯದ 13 ಜಿಲ್ಲೆ ಹೊರತುಪಡಿಸಿ 21 ಶೈಕ್ಷಣಿಕ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಹಾಗಾಗಿ ಈ ವರ್ಷ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ಅವರಿಗೆ ಬೇಕಾದ ಕಡೆ ವರ್ಗಾವಣೆ ಮಾಡಲಾಗುವುದು. ಮುಂದಿನ ವರ್ಷದಿಂದ ಜಿಲ್ಲಾ ಮಟ್ಟದಲ್ಲಿ ಮಾತ್ರ ವರ್ಗಾವಣೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನುತೀರ್ಣರಾದವರಿಗೆ ಪ್ರವೇಶ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಪುನಃ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅವರು ತರಗತಿಗಳಿಂದ ಹೊರಗುಳಿದರೆ ಅನ್ಯ ಚಟುವಟಿಕೆಗಳಲ್ಲಿ ತೊಡಗುವ ಅಪಾಯ ಇರುವುದರಿಂದ ಪುನಃ ಶಾಲೆ-ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡಲಾಗುವುದು. ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಕನ್ನಡ ಮತ್ತು ಇಂಗ್ಲೀಷ್ ಪರೀಕ್ಷೆಯಲ್ಲಿ ವಿನಾಯಿತಿ ನೀಡುವ ಬಗ್ಗೆಯೂ ಚಿಂತನೆ ಇದೆ ಎಂದರು.

*ಶಾಲೆ ಮುಚ್ಚಲ್ಲ*

ರಾಜ್ಯದಲ್ಲಿ 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಇರುವ 4164 ಸಾವಿರ ಶಾಲೆಗಳಿವೆ. ಆದರೆ ಆ ಶಾಲೆಗಳನ್ನು ನಾವು ಮುಚ್ಚುವುದಿಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಲಾಗುವುದು. ಪ್ರಸಕ್ತ ವರ್ಷದಲ್ಲಿ 13 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಅದರ ಪೈಕಿ 10 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮೋದನೆ ಸಿಕ್ಕಿದೆ. ಉಳಿದ 3 ಸಾವಿರ ಶಿಕ್ಷಕರನ್ನು ಸರ್ಕಾರದ ಒಪ್ಪಿಗೆ ಪಡೆದು ನೇಮಿಸಿಕೊಳ್ಳಲಾಗುವುದು. ರಾಜ್ಯದಲ್ಲಿ ಒಟ್ಟು 22 ಸಾವಿರ ಶಿಕ್ಷಕರ ಕೊರತೆ ಇದೆ. ಕೆಎಸ್‌ಆರ್‌ಟಿಸಿ ಮಾದರಿಯಲ್ಲಿ ನಿವೃತ್ತರಾಗುವ ಹುದ್ದೆಗಳಿಗೆ ನೇಮಕಾತಿ ನಡೆಸುವ ಪ್ರಕ್ರಿಯೆಯನ್ನು ಜಾರಿಗೆ ತರಲಾಗುವುದು ಎಂದು ಸೇಠ್ ತಿಳಿಸಿದರು.

*ಸಮವಸ್ತ*

ಮುಂದಿನ ವರ್ಷದಿಂದ ಕೈಮಗ್ಗ ಅಭಿವೃದ್ಧಿ ನಿಗಮದಿಂದಲೇ ಸಮವಸಗಳನ್ನು ಖರೀದಿ ಮಾಡಲಾಗುವುದು. ರಾಜ್ಯದ 47 ಸಾವಿರ ಶಾಲೆಗಳ ಪೈಕಿ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿನ ಎಲ್ಲಾ ಮಕ್ಕಳಿಗೆ ಸಮವಸ ವಿತರಿಸಲಾಗಿದೆ. ಮೈಸೂರು ವಿಭಾಗದಲ್ಲಿ ಮಾತ್ರ ಸ್ವಲ್ಪ ವಿಳಂಬವಾಗಿದೆ. ಈ ತಿಂಗಳಾಂತ್ಯಕ್ಕೆ ಅಲ್ಲಿಯೂ ಸಮವಸ ವಿತರಿಸಲಾಗುವುದು ಎಂದು ಅವರು ಹೇಳಿದರು.

*ಕ್ರಿಮಿನಲ್ ಮೊಕದ್ದಮೆ*

ಸ್ಥಳೀಯ ಮುಖಂಡರೊಬ್ಬರ ಒತ್ತಡಕ್ಕೆ ಮಣಿದು ಯಮಕನಮರಡಿ ಶಾಲೆಯಲ್ಲಿ ಪಾಠ ಮಾಡಲಾಗುತ್ತಿತ್ತು. ಆ ಶಾಲೆಯ ಗೋಡೆ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆ ರೀತಿ ಒತ್ತಡ ಹಾಕಿದ ಸ್ಥಳೀಯ ಮುಖಂಡ ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಅವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸೇಠ್ ತಿಳಿಸಿದರು.

ನೀವೂ ಪ್ರತಿಕ್ರಿಯಿಸಿ
ನೇಮಕಗೊಂಡ ಜಿಲ್ಲೆಯಲ್ಲೇ ನಿವೃತ್ತಿಯಾ
ಗಬೇಕೆಂಬ ಸರ್ಕಾರದ ಪ್ರಸ್ತಾವಿತ ವರ್ಗಾವಣೆ ನೀತಿ ಎಷ್ಟು ಸರಿ. ಶಿಕ್ಷಕ ಸಮುದಾಯಕ್ಕೆ ಇದರಿಂದ ಅನುಕೂಲವಾಗಲಿದೆಯೇ? ಈ ಬಗ್ಗೆ ನಿಮ್ಮ ಅಭಿಪ್ರಾಯ ನಮಗೆ ಬರೆದು ಕಳಿಸಿ.

*ಅಲ್ಲೇ ನೇಮಕ, ಅಲ್ಲೇ ನಿವೃತ್ತಿ*

ಶಿಕ್ಷಕ ದಂಪತಿಗಳ ತೊಂದರೆ ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಹೊಸ ಕಾಯ್ದೆ ಪ್ರಕಾರ ಜಿಲ್ಲೆಯನ್ನು ಘಟಕ ವನ್ನಾಗಿಸಿ ನೇಮಕಾತಿ ಮತ್ತು ವರ್ಗಾವಣೆ ನಡೆಯಲಿದೆ. ಈ ಕಾಯ್ದೆ  ಜಾರಿಗೂ ಮುನ್ನ ಹಾಲಿ ಶಿಕ್ಷಕರಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಗೆ ಒಂದು ಬಾರಿ ಅವಕಾಶ ಕಲ್ಪಿಸಲಾಗುವುದು. ಆ ನಂತರ ಅವಕಾಶ ಇರುವುದಿಲ್ಲ.
| ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ಕಾಮೆಂಟ್‌ಗಳಿಲ್ಲ: