*ನಾನು ಹೆಂಗ್ ಕೆಲ್ಸ ಮಾಡ್ತೀನಿ ನೋಡ್ತಿರಿ!*
ಶಿಕ್ಷಣ ಸಚಿವರೊಂದಿಗೆ ಸಂದರ್ಶನ ವರದಿ👇🏿
(ಉದಯವಾಣಿ,28-07-16)
ಅಧಿಕಾರವಹಿಸಿಕೊಂಡ ಕೂಡಲೇ ಸರ್ಕಾರಿ ಶಾಲೆ ಮುಚ್ಚುವುದಿಲ್ಲ, ವರ್ಗಾವಣೆ ನೀತಿ ಪರಿಷ್ಕರಣೆ ಮಾಡುವೆ ಎಂಬಂತಹ ನಿರ್ಧಾರಗಳ ಮೂಲಕ, ಇಲಾಖೆಯಲ್ಲಿ ಬದಲಾವಣೆ ತರುವ ಉಮೇದಿಯನ್ನು ಸೇs… ತೋರಿಸಿದ್ದಾರೆ. ಆದರೆ, ಸವಾಲುಗಳ ಬೆಟ್ಟವೇ ಅವರ ಮುಂದಿದೆ. ಸದ್ಯಕ್ಕೆ ಶಿಕ್ಷಕರ ವರ್ಗಾವಣೆ ಎಂಬುದು ಪೆಡಂಭೂತವಾಗಿ ಅವರ ಮುಂದೆ ನಿಂತಿದೆ.
ಪ್ರಶ್ನೆಪತ್ರಿಕೆ ಸೋರಿಕೆಯಿಲ್ಲದಂತೆ ಪರೀಕ್ಷೆಗಳನ್ನು ನಡೆಸುವ ಮೂಲಕ ಸಾಮರ್ಥಯ ಸಾಬೀತು ಮಾಡಬೇಕಿದೆ.
ಇದಕ್ಕೆಲ್ಲ ತಮ್ಮ ತಯಾರಿಯೇನು ಎಂಬ ಬಗ್ಗೆ ನೂತನ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇs… ನೇರಾ ನೇರ ಉತ್ತರಿಸಿದ್ದಾರೆ.
*ಪ್ರಶ್ನೆಪತ್ರಿಕೆ ಸೋರಿಕೆ ನಿಮ್ಮ ಇಲಾಖೆಯ ಕಾರ್ಯಕ್ಷಮತೆಯ ಮೇಲೆ ಅನುಮಾನವಿದೆ. ಹೇಗೆ ನಿಭಾಯಿಸುವಿರಿ?*
ಅದನ್ನು ಹೇಳಲ್ಲ, ಮಾಡಿ ತೋರಿಸ್ತೀನಿ.
*ಏನು ತೋರಿಸುವಿರಿ. ಅಧಿಕಾರಿಗಳೇ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಬಗ್ಗೆ ಅನುಮಾನವಿದೆ?*
ನಾನು ಸಚಿವನಾದ ನಂತರ ಅಂದರೆ ಈ ಜುಲೈನಲ್ಲಿ 2.41 ಲಕ್ಷ ಮಕ್ಕಳು ಪಿಯು ಪೂರಕ ಪರೀಕ್ಷೆ ಬರೆದರು. ಐದು ಲಕ್ಷ ಉತ್ತರ ಪತ್ರಿಕೆ ಮೌಲ್ಯಮಾಪನವಾಗಿದೆ. ಐದು ಸಾವಿರ ಮೌಲ್ಯಮಾಪಕರು ಭಾಗಿಯಾದರು.
*ಫಲಿತಾಂಶ ಬುಧವಾರ ಹೊರಬಿದಿದ್ದೆ. ಏನಾದರೂ ಗೊಂದಲ ಉಂಟಾಗಿತ್ತಾ? ಎಲ್ಲವೂ ಸುಲಲಿತವಾಗಿ ನಡೆಯಲಿಲ್ಲವಾ? ಯಾರಾದರೂ ಈ ಬಗ್ಗೆ ಆಕ್ಷೇಪವೆತ್ತಿದ್ದು, ಗದ್ದಲ ಮಾಡಿದ್ದು ಎಲ್ಲಿಯಾದರೂ ಕಂಡು ಬಂತಾ? ನನಗೆ ಹೇಗೆ ಕೆಲಸ ಮಾಡಬೇಕು ಎಂದು ಗೊತ್ತಿದೆ. ನಾನು ಏನು ಮಾಡುತ್ತೇನೆ ಎಂದು ಹೇಳುವುದಿಲ್ಲ. ಸಮಸ್ಯೆಯಿಲ್ಲದಂತೆ ಕೆಲಸ ಮಾಡಿ ತೋರಿಸುತ್ತೇನೆ.
ಇದು ಪೂರಕ ಪರೀಕ್ಷೆ ಅಷ್ಟೇ, ಮುಖ್ಯ ಪರೀಕ್ಷೆಯ ಬೇರೆ...
ಪೂರಕ ಪರೀಕ್ಷೆಯಾಗಲಿ, ಯಾವುದಾದರೂ ಆಗಿರಲಿ. ಯಾವುದೇ ಸಮಸ್ಯೆಯಿಲ್ಲದಂತೆ ಅದನ್ನು ನಡೆಸಿ ಸಾಮರ್ಥಯ ತೋರಿಸಿದ್ದೇನೆ. ಮುಂದೆಯೂ ತೋರುತ್ತೇನೆ. ಹೇಳುವುದಿಲ್ಲ, ಮಾಡುತ್ತೇನೆ.
*ಸೋರಿಕೆಯಲ್ಲಿ ಅಧಿಕಾರಿಗಳ ಪಾತ್ರವಿದೆ. ಅವರು ಈಗಲೂ ಇಲಾಖೆಯಲ್ಲೇ ಇದ್ದಾರೆ. ಹೀಗಿದ್ದಾಗ ಸೋರಿಕೆ ತಡೆ ಹೇಗೆ?*
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಐಡಿ ತನಿಖೆ ಮಾಡುತ್ತಿದೆ. ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಸಿಐಡಿಯವರು ಚಾರ್ಜ್‌ಶೀಟ್ ಹಾಕಿದ್ದಾರೆ. ಆದರೆ, ಇನ್ನೂ ಇಲಾಖೆಗೆ ವರದಿ ಬಂದಿಲ್ಲ. ಅಧಿಕಾರಿಗಳ ಪಾತ್ರವಿದೆಯೋ ಇಲ್ಲವೋ ಗೊತ್ತಿಲ್ಲ. ವರದಿ ಬರದೆ ಈ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ.
*ಶಿಕ್ಷಕರ ವರ್ಗಾವಣೆ ಇನ್ನೂ ಪ್ರಾರಂಭವಾಗಿಲ್ಲ. ಏಕೆ?*
ನಾನು ಇತ್ತೀಚೆಗೆ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ವರ್ಗಾವಣೆ ನೀತಿಯಲ್ಲಿ ಹಲವು ಕೊರತೆಗಳಿವೆ. ಪತಿ-ಪತ್ನಿ ಪ್ರಕರಣ, ಪರಸ್ಪರ ವರ್ಗಾವಣೆ, ಜಿಲ್ಲೆ, ತಾಲ್ಲೂಕು ಘಟಕ ವರ್ಗಾವಣೆ ವಿಚಾರ ಸೇರಿದಂತೆ ಸಾಕಷ್ಟು ನ್ಯೂನತೆಗಳಿವೆ. ಜತೆಗೆ, ಅಂಗವಿಕಲರಿಗೆ ಇಷ್ಟು, ವಿಷಯವಾರು ಶಿಕ್ಷಕರಿಗೆ ಇಂತಿಷ್ಟು, ಪತಿ-ಪತ್ನಿಯರಿಗೆ ಇಂತಿಷ್ಟು ಎಂದೆಲ್ಲಾ ಮೀಸಲಾತಿಯಿದೆ. ಅದರಂತೆ ಮಾಡಿಬಿಟ್ಟರೆ ಬೇರೆಯವರಿಗೆ ಏನೂ ಉಳಿಯುವುದಿಲ್ಲ. ಆದರೆ, ಒಟ್ಟಾರೆ ನಮಗೆ ವರ್ಗಾವಣೆ ಮಾಡಲು ಅವಕಾಶವಿರುವುದು ಶೇ. 5ರಷ್ಟು ಮಾತ್ರ. ಆದರೆ, ಬೇಡಿಕೆ ಭೀಕರವಾಗಿದೆ. ಈ ಬೇಡಿಕೆಯನ್ನು ಮುಟ್ಟಬೇಕು ಎಂದರೆ 100 ವರ್ಷವಾದರೂ ಆಗುತ್ತದೆ. ಇದನ್ನು ಸರಿಪಡಿಸುವ ಚಿಂತನೆ ನಡೆದಿರುವುದರಿಂದ ತುಸು ವಿಳಂಬವಾಗಿದೆ.
*ಏನು ಬದಲಾವಣೆ ಮಾಡುವಿರಿ?*
ಶಿಕ್ಷಕರ ವರ್ಗಾವಣೆ ವಿಚಾರವನ್ನು ವಿಕೇಂದ್ರಿಕರಣ ಮಾಡುವುದು. ಅಂದರೆ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲೇ ಕೌನ್ಸಿಲಿಂಗ್ ಮೂಲಕ ಸಮಸ್ಯೆಯನ್ನು ಅಲ್ಲಲ್ಲೇ ಬಗೆಹರಿಸಿಕೊಳ್ಳಲು ಅವಕಾಶ ನೀಡೋಣ ಎಂದು ಚಿಂತನೆ ಹೊಂದಿದ್ದೇನೆ. ಉಳಿದಂತೆ ಎಲ್ಲಿ ಶಿಕ್ಷಕರ ಅಗತ್ಯವಿದೆಯೋ ಅಲ್ಲಿಗೆ ವರ್ಗಾವಣೆ ಬಯಸುವವರಿಗೆ ನೇರವಾಗಿ ಆದ್ಯತೆ ನೀಡಲು ತೀರ್ಮಾನಿಸಿದ್ದೇನೆ. ಗ್ರಾಮೀಣ ಭಾಗಗಳಿಗೆ ತೆರಳಲು ಬಯಸುವರಿಗೆ ಪ್ರಾಮುಖ್ಯತೆ ನೀಡುವ ಚಿಂತನೆಯಿದೆ. ಈ ರೀತಿ ಈ ವರ್ಷ ಈ ಸಮಸ್ಯೆ ನಿಭಾಯಿಸಿ, ಮುಂದಿನ ವರ್ಷಕ್ಕೆ ಸಮಗ್ರ ನೀತಿ ರೂಪಿಸಿ ವರ್ಗಾವಣೆಗೆ ಸ್ಪಷ್ಟ ನಿಯಮಾವಳಿ ರೂಪಿಸುವೆ.
*ವರ್ಗಾವಣೆ ಪ್ರಮಾಣವನ್ನು ಶೇ.5ರಿಂದ 8ಕ್ಕೆ ಹೆಚ್ಚಳ ಮಾಡುವಿರಿ ಎಂಬ ವದಂತಿಯಿದೆ?*
ಶೇಕಡಾವಾರು ಲೆಕ್ಕಾಚಾರವನ್ನು ನಾನು ಹಾಕುವುದಿಲ್ಲ. ಬೇಡಿಕೆಗೆ ತಕ್ಕಂತೆ ಸಾಧ್ಯವಾದಷ್ಟೂ ವರ್ಗಾವಣೆ ಸಮಸ್ಯೆ ಮುಗಿಸುತ್ತೇನೆ. ಆದ್ಯತೆ ಮೇರೆಗೆ ಈ ವರ್ಷ ತಾಲ್ಲೂಕು-ಜಿಲ್ಲಾ ಘಟಕಗಳಿಗೆ ಆದ್ಯತೆ ನೀಡಲಾಗುವುದು. ಮಕ್ಕಳಿರುವ ತಾಲ್ಲೂಕು ಮತ್ತು ಗ್ರಾಮೀಣ ಭಾಗಗಳಿಗೆ ಸ್ವಯಂ ಪ್ರೇರಿತವಾಗಿ ಹೋಗುವವರಿಗೆ ಆದ್ಯತೆ ಮೇಲೆ ವರ್ಗಾವಣೆ ಮಾಡಲಾಗುವುದು. ಶಿಕ್ಷಕರು ಸರ್ಕಾರದ ಆಸ್ತಿ, ಅವರ ಒಳಿತಿಗೆ ಮುಂದಾಗುತ್ತೇನೆ. ಅವರನ್ನು ಮುಂದಿಟ್ಟುಕೊಂಡು ಯಾರೂ ರಾಜಕೀಯ ಮಾಡಬಾರದು.
*ಹಿಂದಿನ ಸಚಿವರು ಡಿಡಿಪಿಐ, ಬಿಇಓಗಳ ವರ್ಗಾವಣೆಗೂ ನಿಯಮ ರೂಪಿಸಿದ್ದರು?*
ಹಿಂದಿನ ಸಚಿವರಿಗೆ ಅಂತಹ ನಿಯಮ ಮಾಡುವ ಆಲೋಚನೆ ಇದ್ದೀರಬಹುದು. ಆದರೆ, ನಾನು ತನ್ವೀರ್ ಸೇs…. ಯಾರದ್ದೊ ಆಲೋಚನೆಗಳನ್ನು ನಾನು ಅನುಸರಿಸಬೇಕು ಎಂದೇನೂ ಇಲ್ಲ. ಇಲಾಖೆಯನ್ನು ಬಿಗಿಗೊಳಿಸಲು ಏನು ಮಾಡಬೇಕು ಎಂಬ ಬಗ್ಗೆ ನನಗೆ ನನ್ನದೆ ಆದ ಆಲೋಚನೆಗಳಿವೆ. ಅದನ್ನು ಮಾಡುವೆ.
*ಶಿಕ್ಷಕರ ಮೇಲೆ ಪಠ್ಯೇತರ ಹೊರೆ ಹೆಚ್ಚಿದೆ?*
ಖಂಡಿತ, ಶಿಕ್ಷಕರು ಶಿಕ್ಷಣದ ಬಗ್ಗೆ ಮಾತ್ರ ಗಮನ ನೀಡಬೇಕು ಎಂಬುದು ನನ್ನ ಉದ್ದೇಶ. ಸಾಧ್ಯವಾದಷ್ಟು ಶಿಕ್ಷಕರ ಮೇಲಿನ ಇತರ ಹೊಣೆಗಾರಿಕೆಗಳನ್ನು ಕಡಿಮೆ ಮಾಡುವ ದಿಸೆಯಲ್ಲಿ ಆಲೋಚನೆ ಆರಂಭಿಸಿದ್ದೇನೆ. ಉದಾಹರಣೆಗೆ ನೀರು ಮತ್ತು ಶೌಚಾಲಯಗಳ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವುದು. ಮಕ್ಕಳಿಗೆ ಬಿಸಿಯೂಟ ತಯಾರಿಸುವ ಅಡುಗೆ ಕೋಣೆಗಳನ್ನು ನಿಭಾಯಿಸಲು ಸ್ವಯಂ ಸೇವಾ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬಂದರೆ ಅವರಿಗೆ ನೀಡಬಹುದು. ಹೇಗೆ ಎಂದರೆ, ರಾಜ್ಯದ 3600 ಕ್ಸಸ್ಟರ್‌ಗಳಲ್ಲಿನ 12 ರಿಂದ 25 ಶಾಲೆಗಳ ಸಾಮೂಹಿಕ ಅಡುಗೆ ಕೋಣೆಗಳನ್ನು ರೂಪಿಸಿ, ಅದರ ನಿರ್ವಹಣೆ ವಹಿಸುವುದು ಇತ್ಯಾದಿ.
*ಆರ್‌ಟಿಇ ಸರ್ಕಾರಿ ಶಾಲೆಗೆ ಹೊರೆ, ಮೊದಲು ಸರ್ಕಾರಿ ಶಾಲೆಗೆ ಭರ್ತಿ ಮಾಡಿ, ಆಮೇಲೆ ಖಾಸಗಿಗೆ ಅಂತಾರೆ?*
ಮೊದಲು ಭರ್ತಿ ಮಾಡಿ ಅನ್ನೋಕೆ ಸರ್ಕಾರಿ ಶಾಲೆಗಳೇನು ನೀರಿನ ಟ್ಯಾಂಕಾ? ಆರ್‌ಟಿಇ ಕಾಯ್ದೆ ಸರ್ಕಾರಿ ಶಾಲೆಗಳಿಗೆ ಮಾರಕ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಸರ್ಕಾರಿ ಶಾಲೆಗಳಿಂದ ಮಕ್ಕಳು ದೂರವಾಗಲು ಪೋಷಕರ ಮನಸ್ಥಿತಿ, ಪಾಶ್ಚಿಮಾತ್ಯ ಪದ್ಧತಿಗಳ ಆಕರ್ಷಣೆ, ಆಂಗ್ಲ ಭಾಷಾ ವ್ಯಾಮೋಹ, ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಗೌರವ ಎಂಬಿತ್ಯಾದಿ ಕಲ್ಪನೆ ಕಾರಣ. ಇದೇ ವೇಳೆ ಆರ್‌ಟಿಇ ಕಾಯ್ದೆಗೆ ಅದರದ್ದೇ ಆದ ಮೌಲ್ಯಗಳಿವೆ. ಸಮಾನ ಶಿಕ್ಷಣ ನೀಡುವ ದೃಷ್ಟಿಯಿಂದ ಯುಪಿಎ ಸರ್ಕಾರದ ಅವಧಿಯಲ್ಲಿ ಆರ್‌ಟಿಇ ನಿಯಮ ಜಾರಿಗೆ ತರಲಾಗಿದೆ. ಆರ್‌ಟಿಇ ಒಂದೇ ಇದಕ್ಕೆ ಕಾರಣವಲ್ಲ. ಆರ್‌ಟಿಇ ಜಾರಿಗೂ ಮೊದಲಿನ 25 ವರ್ಷದ ಸ್ಥಿತಿಗತಿ ನೋಡಿದಾಗ ನಮ್ಮಲ್ಲಿ ಏನಾಗುತ್ತಿದೆ ಎಂಬುದು ಅರ್ಥವಾಗುತ್ತದೆ.
*ಆರ್‌ಟಿಇ- ಬಿಸಿಯೂಟ ಯೋಜನೆಗಳನ್ನು ಪಿಯುಸಿಗೂ ವಿಸ್ತರಿಸಬೇಕೆಂದು ಕೆಲ ಸಚಿವರು ಹೇಳುತ್ತಿದ್ದಾರೆ?*
ಆರ್‌ಟಿಇ ಯೋಜನೆಪಿಯುಸಿಗೆ ವಿಸ್ತರಿಸುವ ಆಲೋಚನೆ ಸದ್ಯಕ್ಕೆ ಇಲ್ಲ. ಇನ್ನು ಬಿಸಿಯೂಟವನ್ನು ಪಿಯುಸಿಗೆ ವಿಸ್ತರಿಸಬೇಕು ಎಂದರೆ ವಿಸ್ತರಿಸಬಹುದು. ಆದರೆ, ಇಂತಹ ಹೇಳಿಕೆ ಯಾರು ಕೊಡುತ್ತಿದ್ದಾರೋ ಅವರು ಸ್ವಲ್ಪ ಹಣವನ್ನು ಕೊಟ್ಟರೇ ಇದೆಲ್ಲ ಮಾಡಬಹುದು.
*ಪಠ್ಯಕ್ರಮಗಳನ್ನು ಕೇಸರಿಕರಣ ಮುಕ್ತಗೊಳಿಸುವ*.
(ಪ್ರಶ್ನೆ ತುಂಡರಿಸಿ) ಆ ಪದ (ಕೇಸರಿಕರಣ) ಬಳಸಬೇಡಿ. ಇಂತಹ ಮಾತುಗಳನ್ನು ಈಗ ಯಾರು ಹೇಳುತ್ತಿದ್ದಾರೋ ಅವರ ಅವಧಿಯಲ್ಲೇ ಅಲ್ಲವೇ ಬರಗೂರು ಸಮಿತಿ ರಚನೆಯಾಗಿತ್ತು. 2011-12ನೇ ಸಾಲಿನಲ್ಲಿ ಪ್ರಥಮವಾಗಿ 1ರಿಂದ 4ನೇ ತರಗತಿವರೆಗೆ ಪರಿಷ್ಕರಣೆ ಆಗಿತ್ತು. ಈಗ 1ರಿಂದ 10ನೇ ತರಗತಿ ವರೆಗೆ ಎಲ್ಲಾ ಪಠ್ಯಗಳ ಪರಿಷ್ಕರಣೆ ಆಗುತ್ತಿದೆ. ಪರಿಷ್ಕರಣೆ ಅಂದಾಗ ಅದರಲ್ಲಿ ಬದಲಾವಣೆಯೂ ಸೇರಿರುತ್ತದೆ.
*ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸುವ ಆಲೋಚನೆ ಇದೆಯೇ?*
ಇದೆ. ಈ ವರ್ಷ ಹಲವಾರು ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ತರಗತಿ ಆರಂಭವಾಗಿವೆ. ವಾಸ್ತವವಾಗಿ ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಪ್ರೀ ನರ್ಸರಿ ಆರಂಭಿಸಲು ವಿಚಾರ ಇಲ್ಲ. ಹೀಗಾಗಿ ಸಂಘ ಸಂಸ್ಥೆಗಳ ಮೂಲಕ ಮಾಡಿಸುವುದಾದರೇ ಸಂಘ ಸಂಸ್ಥೆಗಳಿಗೂ ಸರ್ಕಾರಿ ವ್ಯವಸ್ಥೆಗೂ ಹೇಗೆ ಹೊಂದಾಣಿಕೆ ಮಾಡಬೇಕು ಎಂಬ ಗೊಂದಲವಿದೆ. ಹೀಗಾಗಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಆರಂಭಿಸುವ ಹೊಣೆಯನ್ನು ಶಾಲಾ ಮೇಲುಸ್ತುವಾರಿ ಸಮಿತಿಗಳಿಗೆ ಕೊಟ್ಟರೆ ಹೇಗೆ, ಅವು ಈ ತರಗತಿಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲವೇ ಎಂಬುದನ್ನು ಆಲೋಚಿಸಬೇಕಿದೆ. ಒಟ್ಟಾರೆ ಬೇಡಿಕೆ ಆಧರಿಸಿ ನರ್ಸರಿ ತರಗತಿಗಳನ್ನು ಆರಂಭಿಸಲಾಗುವುದು.
*ಸರ್ಕಾರಿ ಶಾಲೆಗೆ ಏಕೆ ಮಕ್ಕಳು ಬರುವುದಿಲ್ಲ. ಬರುವಂತೆ ಮಾಡಲು ನಿಮ್ಮ ಕಾರ್ಯಕ್ರಮವೇನು?*
ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ನಾನು ಅಧಿಕಾರ ವಹಿಸಿಕೊಂಡ ಕೂಡಲೇ ಸರ್ಕಾರಿ ಶಾಲೆಗಳನ್ನು ಇನ್ಮುಂದೆ ಮುಚ್ಚುವುದಿಲ್ಲ ಎಂದು ಆದೇಶ ಮಾಡಿದ್ದೇನೆ. ಈಗ ನಾವು ಸರ್ಕಾರಿ ಶಾಲೆಯಲ್ಲಿ ಊಟ, ಸಮವಸ್ತ್ರ, ಶೂ,ಸಾಕ್ಸ್ ಪಠ್ಯ ಪುಸ್ತಕ ಸೇರಿದಂತೆ ಎಲ್ಲಾ ಸೌಲಭ್ಯ ನೀಡುತ್ತಿದ್ದೇವೆ. ಆದರೂ, ಮಕ್ಕಳ ಕೊರತೆಯಿದೆ. ಏಕೆಂದರೆ, ಶಾಲೆಗೆ ಮಕ್ಕಳು ಬರುವುದು ಗುಣಮಟ್ಟದ ಶಿಕ್ಷಣಕ್ಕಾಗಿ. ಈ ದಿಸೆಯಲ್ಲಿ ನನ್ನ ಆಲೋಚನೆಯಿದೆ. ಗುಣಮಟ್ಟದ ಶಿಕ್ಷಣ ನೀಡಲು ಖಾಸಗಿ ಸಂಸ್ಥೆಗಳ ನೆರವನ್ನು ಪಡೆಯಲು ನಿರ್ಧರಿಸಲಾಗಿದೆ.
*ಇಲಾಖೆಯ ಸಬಲೀಕರಣಕ್ಕೆ ನಿಮ್ಮ ಯೋಜನೆಯೇನು?*
ನಾನು ಅಧಿಕಾರ ಸ್ವೀಕರಿಸಿ ಗುರುವಾರಕ್ಕೆ 38ನೇ ದಿನವಾಗಿದೆ. ಈ ಅವಧಿಯಲ್ಲಿ ಇಲಾಖೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನ ಮಾಡಿದ್ದೇನೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಮಕ್ಕಳ ದಾಖಲಾತಿಯನ್ನ ಆನ್‌ಲೈನ್ ಮಾಡಿದ್ದೇನೆ. ಈ ಕಾರ್ಯ ಶೇ.80ರಷ್ಟು ಮುಗಿದಿದೆ. ಮುಂದೆ ಹಾಜರಾತಿಯನ್ನೂ ಆನ್‌ಲೈನ್ ಮಾಡುವ ಉದ್ದೇಶವಿದೆ. ಇದರಿಂದ ಅಧಿಕಾರಿಗಳು ಕೆಲವೊಮ್ಮೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆಯ ನೆಪದಲ್ಲಿ ಶೋಷಣೆ ತಪ್ಪಿಸಲು ಅನುಕೂಲವಾಗುತ್ತದೆ.
*ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ತಡೆಗೆ ?*
ಭ್ರಷ್ಟಾಚಾರ ಹಾಗೂ ಡೊನೇಷನ್ ವಿಚಾರದಲ್ಲಿ ಕೊಡೋನು ಇರುವವರೆಗೂ ತಗೋಳ್ಳೋನು ತಗೋತಾನೆ. ಗುಣಮಟ್ಟದ ಶಿಕ್ಷಣಕ್ಕಾಗಿ ಖಾಸಗಿಯತ್ತ ಎಲ್ಲರೂ ಮುಖ ಮಾಡುತ್ತಾರೆ. ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ ನೀಡಿದರೆ ಸ್ಥಿತಿ ಬದಲಾಗಬಹುದು. ಈ ದಿಸೆಯಲ್ಲಿ ಶಾಲೆಗಳ ಗುಣಮಟ್ಟ ಹೆಚ್ಚಳಕ್ಕಾಗಿಯೇ ಒಂದು ಪ್ರತ್ಯೇಕ ನಿಧಿಯನ್ನು ಸ್ಥಾಪಿಸುವ ಉದ್ದೇಶವಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಖಾಸಗಿಯವರು ದೇಣಿಗೆ ನೀಡಬಹುದು
*ಇಂತಿಷ್ಟು ವ್ಯಾಪ್ತಿಗೊಂದು ಶಾಲೆ, ಕಾಲೇಜು ಇರಬೇಕೆಂಬ ನಿಯಮ ಉಲ್ಲಂಘನೆಯಲ್ಲಿ ಅಧಿಕಾರಿಗಳ ಪಾತ್ರವಿದೆ?*
ತಪ್ಪಾಗಿದೆ ನಿಜ. ಆದರೆ, ಈಗ ಆ ತಪ್ಪಿನ ಮೂಲ ಹುಡುಕಿಕೊಂಡು ಹೋಗುವುದಿಲ್ಲ. ಮುಂದೆ ಇಂತಹ ತಪ್ಪು ನಡೆಯದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಅನುದಾನಿತ, ಖಾಸಗಿ ಶಾಲೆಗಳೂ ನಮ್ಮವೇ (ಸರ್ಕಾರ). ಅವುಗಳ ಆರಂಭಕ್ಕೂ ನಿರಾಕ್ಷೇಪಣಾ ಪತ್ರ ನೀಡಿರೋದು ರಾಜ್ಯ ಸರ್ಕಾರ. ಹೀಗೆ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳು ಸೇರಿ ನಿರ್ದಿಷ್ಟ ವ್ಯಾಪ್ತಿಯಲ್ಲಿ ನಿಗದಿಗಿಂತ ಹೆಚ್ಚಿನ ಶಾಲೆಗಳು ಹುಟ್ಟಿಕೊಂಡಿವೆ. ಈ ಎಲ್ಲಾ ಶಾಲೆಗಳಲ್ಲೂ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವ ದಿಸೆಯಲ್ಲಿ ಪ್ರಯತ್ನ ಮಾಡುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ