ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

22.8.16

ಒಲಿಂಪಿಕ್ಸ್ ಇರಲಿ, 44 ಸಾವಿರ ಪಿಟಿ (ದೈಹಿಕ ಶಿಕ್ಷಕರು)ಮೇಷ್ಟ್ರೇ ಇಲ್ಲ!

ಒಲಿಂಪಿಕ್ಸ್ ಇರಲಿ, 44 ಸಾವಿರ ಪಿಟಿ (ದೈಹಿಕ ಶಿಕ್ಷಕರು)ಮೇಷ್ಟ್ರೇ ಇಲ್ಲ!* ವಿಜಯವಾಣಿ AUG.22
ಅಮರೇಶ ಚಿಲ್ಕರಾಗಿ/ರಾಜೀವ ಹೆಗಡೆ
ಬ್ರೆಜಿಲ್�ನ ರಿಯೋದಲ್ಲಿ ನಡೆದ ಒಲಿಂಪಿಕ್ಸ್�ಗೆ 117 ಕ್ರೀಡಾಪಟುಗಳನ್ನೊಳಗೊಂಡ ಈವರೆಗಿನ ಅತಿ ದೊಡ್ಡ ತಂಡ ಕಳಿಸಿದ್ದ ಭಾರತ ಗೆದ್ದಿದ್ದು ಮಾತ್ರ ಎರಡೇ ಪದಕ. ಇದಕ್ಕೆ ಕ್ರೀಡಾಪಟುಗಳ ಅಸಾಮರ್ಥ್ಯ ದೂರಿ ಪ್ರಯೋಜನವಿಲ್ಲ. ಏಕೆಂದರೆ, ಸಮರ್ಥ ಕ್ರೀಡಾಪಟುಗಳನ್ನು ರೂಪಿಸುವ ವ್ಯವಸ್ಥೆಯೇ ನಮ್ಮಲ್ಲಿಲ್ಲ. ಇದು ಕೇವಲ ಭಾವಾವೇಶದ ಮಾತಲ್ಲ. ಮಕ್ಕಳ ಕ್ರೀಡಾಸಕ್ತಿಯನ್ನು ಶಾಲಾ ಮಟ್ಟದಲ್ಲೇ ಗುರುತಿಸಿ ಬೆಳೆಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವವಾದುದು. ಆದರೆ, ನಮ್ಮ ರಾಜ್ಯದ ಮಟ್ಟಿಗೇ ಹೇಳುವುದಾದರೆ, 44 ಸಾವಿರ ಶಾಲೆಗಳಲ್ಲಿ ಪಿ.ಟಿ. ಟೀಚರ್�ಗಳೇ ಇಲ್ಲ. ಅಂದರೆ, ಈ ಶಾಲೆಗಳಲ್ಲಿ ಕಲಿಯುವ ಸುಮಾರು 60 ಲಕ್ಷ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿಯ ‘ಭಾಗ್ಯ’ವೇ ಇಲ್ಲ.PSGadyal teacher Vijayapur
ಒಲಿಂಪಿಕ್ಸ್�ಗೆಂದು ತರಬೇತಿ ಪಡೆಯುವ ಅಥ್ಲೀಟ್�ಗಳಿಗೆ 50 ಲಕ್ಷ ರೂ., ಒಂದು ಕೋಟಿ ರೂ. ನೆರವು ನೀಡುವ ರಾಜ್ಯ ಸರ್ಕಾರ, ಕಳೆದ 11 ವರ್ಷಗಳಿಂದ 44 ಸಾವಿರ ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇಷ್ಟೇ ಅಲ್ಲ, ನಮ್ಮ 39 ಸಾವಿರ ಶಾಲೆಗಳಿಗೆ ಆಟದ ಮೈದಾನದ ಸೌಲಭ್ಯವೂ ಇಲ್ಲ. ಹೀಗಿರುವಾಗ ಒಲಿಂಪಿಕ್ಸ್ ಪದಕದ ಮಾತಿರಲಿ, ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವುದೂ ಸಾಧ್ಯವಿಲ್ಲ. ಒಟ್ಟಾರೆ ನಮ್ಮಲ್ಲಿ ಕ್ರೀಡೆ ಖಾಸಗಿ ಕೋಚಿಂಗ್ ಕೊಡಿಸುವ ದುಡ್ಡಿದ್ದವರಿಗೆ ಮಾತ್ರ ಎನ್ನುವಂತಾಗಿದೆ.
ಒಲಿಂಪಿಕ್ ಪದಕ ಪಟ್ಟಿಯ ಉತ್ತುಂಗ ದಲ್ಲಿರುವ ಅಮೆರಿಕ, ಚೀನಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಪ್ರಾಥಮಿಕ ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ತರಬೇತಿ ನೀಡಲಾಗುತ್ತದೆ. ಜತೆಗೆ ಎರಡು ಕ್ರೀಡೆಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯವೂ ಇರುತ್ತದೆ. ಆದರೆ ಭಾರತದಲ್ಲಿ ಕಡ್ಡಾಯ ಮಾಡುವುದು ಹಾಗಿರಲಿ, ಕ್ರೀಡೆಯ ನಿಯಮ ಹೀಗಿರುತ್ತದೆ ಎಂದು ಹೇಳಲು ದೈಹಿಕ ಶಿಕ್ಷಕರೂ ಇಲ್ಲ, ಮೈದಾನದ ಸುತ್ತಳತೆ ಇಷ್ಟಿರುತ್ತದೆ ಎಂದು ತೋರಿಸಲು ಆಟದ ಮೈದಾನವೇ ಇರುವುದಿಲ್ಲ. ಇಂತಹ ಮೂಲ ಸೌಕರ್ಯವನ್ನೇ ಒದಗಿಸದೆ 125 ಕೋಟಿ ಜನರಿರುವ ದೇಶಕ್ಕೆ ಕೇವಲ 2 ಪದಕವೇ ಎಂದು ಮೂಗು ಮುರಿಯುವುದರಲ್ಲಿ ಅರ್ಥವಿಲ್ಲ.
ರಾಜ್ಯದ 21 ಸಾವಿರ ಹಿರಿಯ ಪ್ರಾಥಮಿಕ ಹಾಗೂ 23 ಸಾವಿರ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಸಿಪಿಇಡಿ, ಬಿಪಿಇಡಿ ಹಾಗೂ ಎಂಪಿಇಡಿ ಪದವಿ ಮುಗಿಸಿದ 1.17 ಲಕ್ಷ ನಿರುದ್ಯೋಗಿ ದೈಹಿಕ ಶಿಕ್ಷಕ ಆಕಾಂಕ್ಷಿಗಳು ನೇಮಕ ಪ್ರಕ್ರಿಯೆಗೆ ಕಾಯುತ್ತಿದ್ದಾರೆ. ಸುಮಾರು 80 ಸಾವಿರ ಅಭ್ಯರ್ಥಿಗಳು ಸಿಪಿಇಡಿ, 30 ಸಾವಿರ ಅಭ್ಯರ್ಥಿಗಳು ಬಿಪಿಇಡಿ ಹಾಗೂ 7 ಸಾವಿರ ಅಭ್ಯರ್ಥಿಗಳು ಎಂಪಿಇಡಿ ಪದವಿ ಮುಗಿಸಿ, ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ. 11 ವರ್ಷಗಳಲ್ಲಿ ಸುಮಾರು 20 ಸಾವಿರದಷ್ಟು ಅಭ್ಯರ್ಥಿಗಳ ವಯೋಮಿತಿ ಮುಗಿದಿದೆ.
*ಹೆಸರಿಗೆ ಮಾತ್ರ ಕಾಯ್ದೆ:*
2007ರಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯ ಬೋಧನಾ ವಿಷಯವಾಗಿಸಿ ಆದೇಶ ಹೊರಡಿಸಲಾಗಿದ್ದರೂ ಶಿಕ್ಷಣ ಇಲಾಖೆಯೇ ಅದನ್ನು ಪಾಲಿಸುತ್ತಿಲ್ಲ. 1ರಿಂದ 7ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆಗೆ ಒಬ್ಬ ದೈಹಿಕ ಶಿಕ್ಷಕರ ನೇಮಕ ಎಂಬ ಈ ಹಿಂದೆ ಅನುಸರಿಸಲಾಗುತ್ತಿದ್ದ ನಿಯಮವೂ ಪಾಲನೆಯಾಗುತ್ತಿಲ್ಲ. ಶಿಕ್ಷಣ ಇಲಾಖೆಯು ದೈಹಿಕ ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆಯ ಅನುಮೋದನೆ ಕೋರಿದ್ದರೂ ಪ್ರಯೋಜನವಾಗಿಲ್ಲ. ವಿಚಿತ್ರವೆಂದರೆ ಖಾಲಿ ಹುದ್ದೆಗಳನ್ನು ಘೊಷಿಸುವಾಗ ದೈಹಿಕ ಶಿಕ್ಷಕರ ಹುದ್ದೆಯನ್ನು ಶಿಕ್ಷಣ ಇಲಾಖೆ ತೋರಿಸುತ್ತಲೇ ಇಲ್ಲ. ಅಧಿಕಾರಿಗಳು ಹಾಗೂ ಸಚಿವರ ಭಾಷಣದಲ್ಲಿ ಮಾತ್ರ ಪಠ್ಯದ ಜತೆಗೆ ಆಟವೂ ಮುಖ್ಯ ಎಂದು ಹೇಳುತ್ತಾರೆ.
ನಾವು ಕೇವಲ ಒಲಿಂಪಿಕ್ಸ್�ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತೇವೆ. ಇಂತಹ ಆಲೋಚನೆಯಿಂದ ಹೊರಬಂದು ವಿಶ್ವ ದಾಖಲೆ ಸ್ಥಾಪಿಸುವ ಮಟ್ಟಕ್ಕೆ ಯೋಚನೆ ಮಾಡಬೇಕು. ಯುವ ಅಥ್ಲೀಟ್�ಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿದರಷ್ಟೆ ಯಶಸ್ಸು ಗಳಿಸಲು ಸಾಧ್ಯ. 4, 8 ವರ್ಷಗಳಿಗೆ ಆಗುವಂತಹ ಯೋಜನೆಗಳನ್ನು ರೂಪಿಸಬೇಕು.
| ಜಿ.ವಿ. ಗಾಂವ್ಕರ್ ಅಥ್ಲೆಟಿಕ್ಸ್ ಕೋಚ್
*ದೈಹಿಕ ಶಿಕ್ಷಕರ ಹುದ್ದೆಗಳ ನೇಮಕಾತಿ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಸಮಗ್ರ ವರದಿ ಸಂಗ್ರಹಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.*
| ತನ್ವೀರ್ ಸೇಠ್ ಶಿಕ್ಷಣ ಸಚಿವ
ಕ್ರೀಡಾಭಿವೃದ್ಧಿಗಾಗಿ ಬರೀ ಹಣ ಖರ್ಚು ಮಾಡಿದರೆ ಪ್ರಯೋಜನವಿಲ್ಲ. ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನಗಳಿಲ್ಲ, ದೈಹಿಕ ಶಿಕ್ಷಕರಿಲ್ಲ. ಇದು ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಕಥೆ. ಲಕ್ಷಾಂತರ ರೂಪಾಯಿ ಡೊನೇಷನ್ ತೆಗೆದುಕೊಳ್ಳುವ ಖಾಸಗಿ ಶಾಲೆಗಳಲ್ಲಿ ಕಟ್ಟಡ ದೊಡ್ಡದಾಗಿ ಬೆಳೆದು, ಮೈದಾನಗಳು ಚಿಕ್ಕದಾಗುತ್ತಿವೆ. ಪಾಲಕರು ಸ್ವತಃ ಆಸಕ್ತಿ ವಹಿಸಿದರಷ್ಟೆ ಕ್ರೀಡಾಕ್ಷೇತ್ರಕ್ಕೆ ಮಕ್ಕಳು ಬರುತ್ತಿದ್ದಾರೆ. ಒಲಿಂಪಿಕ್ಸ್ ವೇಳೆಯಲ್ಲಿ ಕುಂದುಕೊರತೆಗಳ ಬಗ್ಗೆ ವಿಶ್ಲೇಷಿಸುತ್ತೇವೆ. ಆದರೆ, ಪ್ರಾಥಮಿಕ ಹಂತದಲ್ಲೇ ಸಾಕಷ್ಟು ನ್ಯೂನತೆಗಳಿವೆ. ಕೇವಲ ಸಂಬಳಕ್ಕಾಗಿ ದುಡಿಯುವ ದೈಹಿಕ ಶಿಕ್ಷಕರನ್ನು ನೇಮಿಸುವ ಬದಲಿಗೆ ಕ್ರೀಡೆಯಲ್ಲಿ ಪಳಗಿರುವ ಯುವಕರನ್ನು ಶಿಕ್ಷಕರನ್ನಾಗಿ ನೇಮಿಸಲಿ. ದೈಹಿಕ ಶಿಕ್ಷಣದಲ್ಲಿ ಗುಣಮಟ್ಟ ತಂದರಷ್ಟೆ ದೊಡ್ಡಮಟ್ಟದಲ್ಲಿ ಯಶಸ್ಸು ನಿರೀಕ್ಷಿಸಲು ಸಾಧ್ಯ.
ವಿ.ಆರ್.ಬೀಡು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕೋಚ್
*ದುರವಸ್ಥೆಯ ಈ ಪರಿ ನೋಡಿ*
ದೇಶದ ಶೇ.41 ಶಾಲೆಗಳಿಗೆ ಆಟದ ಮೈದಾನವೇ ಇಲ್ಲ.
ರಾಜ್ಯದಲ್ಲಿ ಆಟದ ಮೈದಾನವಿಲ್ಲದ ಶಾಲೆ ಗಳ ಸಂಖ್ಯೆ 38,982
ರಾಜ್ಯದಲ್ಲಿ ದೈಹಿಕ ಶಿಕ್ಷಣ ದೊರೆಯದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 60 ಲಕ್ಷ.
*************

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು