ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

15.2.18

ಲಂಬಾಣಿ ಜನಾಂಗದ ದಾರ್ಶನಿಕ, ಸಾಧುಪುರುಷ ಸೇವಾಲಾಲ*

🙏✍🏿 *ಲಂಬಾಣಿ ಜನಾಂಗದ ದಾರ್ಶನಿಕ, ಸಾಧುಪುರುಷ ಸೇವಾಲಾಲ*


(ಆರಾಧನೆ: ಪ್ರೋ.ಕೆ. ಖಂಡೋಬ)

*ಫೆಬ್ರವರಿ 15, 2018 ಮಹಾ ಸಂತ ಶ್ರೀ ಸೇವಾಲಾಲರ 279ನೇ ಜಯಂತಿ. ಕರ್ನಾಟಕ ಸರಕಾರ ಈ ಮಹಾಸಂತನ ಜಯಂತಿಯನ್ನು ಕರ್ನಾಟಕದಾದ್ಯಂತ ಮೊಟ್ಟಮೊದಲ ಬಾರಿಗೆ ಸರಕಾರದ ವತಿಯಿಂದ ಆಚರಿಸುತ್ತಿದ್ದು, ತನ್ನಿಮಿತ್ತ ಈ ಲೇಖನ, ಲೋಕಕಲ್ಯಾಣಕ್ಕಾಗಿ ಈ ಭರತ ಭೂಮಿಯಲ್ಲಿ ಹಲವು ಜನ ಸಾಧು-ಸಂತರು, ಸತ್ಪುರುಷರು, ಮೇಧಾವಿಗಳು, ದಾರ್ಶನಿಕರು, ಬುದ್ಧಿಜೀವಿಗಳು ಮತ್ತು ತ್ಯಾಗಿಗಳು ಅವತರಿಸಿದ್ದಾರೆ. ಜನತೆಯಲ್ಲಿನ ಜಾತಿಪದ್ಧತಿ ಮತ್ತು ಧರ್ಮಾಂಧತೆಗಳನ್ನು ತೊಡೆದುಹಾಕಲು ಆಯಾ ಕಾಲಘಟ್ಟದಲ್ಲಿ ಹಲವು ಜನ ಸಾಂಸ್ಕೃತಿಕ ನಾಯಕರು, ಮೇಧಾವಿಗಳು ಹೋರಾಟ ಮಾಡಿದ್ದಾರೆ.*

*ಸೇವಾಲಾಲನ ಜನನ, ಮರಣ, ಜೀವನ, ಸಾಧನೆ, ಹೋರಾಟಗಳ ಹಿನ್ನೆಲೆಯಲ್ಲಿ ಲಂಬಾಣಿ ಮೌಖಿಕ ಪರಂಪರೆಯಲ್ಲಿ ಹಲವು ಐತಿಹ್ಯ ಕಥೆ ಪುರಾಣಗಳು ಹುಟ್ಟಿಕೊಂಡಿವೆ. ಇವುಗಳು ಸೇವಾಲಾಲನ ವಾಸ್ತವ ಸಂಗತಿಗಳಿಗಿಂತ ಹೆಚ್ಚಾಗಿ ಅವನನ್ನು ಒಬ್ಬ ಪೌರಾಣಿಕ ವ್ಯಕ್ತಿಯನ್ನಾಗಿ ಚಿತ್ರಿಸಿ ದೈವತ್ವಕ್ಕೆ ಏರಿಸಿವೆ. ವಾಸ್ತವವಾಗಿ ಸೇವಾಲಾಲ ತಮ್ಮ ಜೀವಿತ ಕಾಲಾವಧಿಯಲ್ಲಿ ತನ್ನನ್ನು ನಂಬಿದ ಒಂದು ಜನಾಂಗದ ತನ್ನದೆಲ್ಲವನ್ನೂ ಧಾರೆ ಎರೆದ ಒಬ್ಬ ಮಹಾಸಂತನೆಂಬುದು ಸತ್ಯ. ಲಂಬಾಣಿಗರಲ್ಲಿ ಸೇವಾಲಾಲ್ ಬಹುದೊಡ್ಡ ಸಾಧುಪುರುಷ. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಅಧ್ಯಾತ್ಮವನ್ನು ಅಪ್ಪಿಕೊಂಡು, ತನ್ನ ಜನಾಂಗದ ಸೇವೆಯನ್ನು ಮಾಡಿದ ಮಹಾನ್ ಹಿತಚಿಂತಕ. ಅಧ್ಯಾತ್ಮದ ಮೂಲಕವಾಗಿ ಜನಾಂಗಕ್ಕೆ ಉಪದೇಶಗಳನ್ನು ನೀಡಿ, ಸನ್ಮಾರ್ಗದತ್ತ ಕೊಂಡೊಯ್ದ ಮಾರ್ಗದರ್ಶಕ. ಸೇವಾಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಇಂದು ಐಕ್ಯತೆ ಯನ್ನುಂಟುಮಾಡಿರುವುದು ಸ್ಪಷ್ಟ.*

*ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಮಹಾನುಭಾವರ ಸತ್ಕಾರ್ಯಗಳೇ ಕಾರಣವಾಗಿವೆ. ಹೀಗಾಗಿ ಬಂಜಾರ ಸಮುದಾಯದಲ್ಲಿ ಸೇವಾಲಾಲರು ವೀರನಾಗಿ, ವಿರಾಗಿಯಾಗಿ, ಒಬ್ಬ ಶ್ರೇಷ್ಠ ದಾರ್ಶನಿಕನಾಗಿ ಮತ್ತು ಸಾಂಸ್ಕೃತಿಕ ನಾಯಕನಾಗಿ ಚಿರಸ್ಥಾಯಿಯಾಗಿದ್ದಾರೆ. ಸೇವಾಲಾಲರು ಹುಟ್ಟಿನಿಂದಲೇ ದೈವಾಂಶ ಸಂಭೂತ. ಆತನ ಚರಿತ್ರೆ, ಪವಾಡ, ಅವತಾರ, ಮೊದಲಾದವುಗಳನ್ನು ಲಂಬಾಣಿಗಳು ತಮ್ಮ ಭಜನೆಗಳಲ್ಲಿ ದಿನಗಟ್ಟಲೆ, ವಾರಗಟ್ಟಲೇ ಹಾಡುತ್ತಾರೆ. ಸೇವಾಲಾಲರ ಕಾಲ, ಜನನ, ವೃತ್ತಾಂತ, ಮರಣ ಮತ್ತು ಬದುಕಿನ ಬಗೆಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಚಾರಿತ್ರಿಕ ಆಧಾರಗಳು ಇಲ್ಲದ್ದರಿಂದ ಯಾವುದೇ ಖಚಿತವಾದ ಮಾಹಿತಿಗಳು ದೊರೆಯುವುದಿಲ್ಲ. ಅವರ ಕಥನ ಗೀತೆಗಳು, ಲಾವಣಿಗಳು, ಭಜನೆ-ಗೀತೆ ಹಾಗೂ ಕೆಲವು ಭೌಗೋಳಿಕ ಆಧಾರಗಳನ್ನು ಆಧರಿಸಿ ಇದೀಗ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪವೇ ಸೇವಾಲಾಲರ ಜನ್ಮಸ್ಥಳವೆಂದು ನಿರ್ಧರಿಸಲಾಗಿದೆ. ಈ ಪ್ರದೇಶದಲ್ಲಿ ಇಂದಿಗೂ ಕಂಡುಬರುವ ಝುಮ್ರಿ ಝೋಲ್, ಭೂರಿಪಟಾರ್, ಚಂದನಖೋಳಿ, ಕಾಳೋಕೂಂಡೋ, ಕಿಂಚೇರ್ ಗುಂಡಿ, ಬನದವ್ವನ ಗುಡಿ ಮತ್ತು ಗೊಲ್ಲನಮಟ್ಟಿ ಮೊದಲಾದ ಸ್ಥಳಗಳು ಅವರ ಲಾವಣಿಗಳಲ್ಲಿ ಸ್ಪಷ್ಟವಾಗಿ ದಾಖಲಾಗಿರುವುದರಿಂದ ಸೂರಗೊಂಡನಕೊಪ್ಪ ಪ್ರದೇಶವೇ ಸೇವಾಲಾಲರ ಜನ್ಮಸ್ಥಳ ಆಗಿರುವುದರಲ್ಲಿ ಯಾವ ಸಂದೇಹಗಳು ಇರಲಾರವು.*

*ಭೀಮಾ ನಾಯಕ ಹಾಗೂ ಧರ್ಮಿಣಿ ಬಾಯಿಗೆ ಮದುವೆ ಮಾಡುತ್ತಾರೆ. ಮದುವೆಯಾಗಿ 12 ವರ್ಷ ಕಳೆದರೂ ಸಂತಾನ ಪ್ರಾಪ್ತಿಯಾಗುವುದಿಲ್ಲ. ಈ ದಂಪತಿಗಳಿಬ್ಬರೂ ಜಗನ್ಮಾತೆಯ ಭಕ್ತಿಸೇವೆಯಲ್ಲಿ ಸುಖ-ಸಂತೋಷದಿಂದ ಬದುಕು ಸಾಗಿಸುತ್ತಿದ್ದರು. ಸಂತಾನ ಪ್ರಾಪ್ತಿಗಾಗಿ ಕಂಡ ಕಂಡ ದೇವರು-ದೇವತೆಗಳಿಗೆ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಕೊನೆಗೆ, ಜಗದಂಬೆಯನ್ನೇ ನಂಬಿಕೊಂಡು ಅವಳ ಭಕ್ತಿಯಲ್ಲಿ ಕಾಲ ಕಳೆಯುತ್ತಾ, ಸಂತಾನ ಪ್ರಾಪ್ತಿಗಾಗಿ ಸಂಕಲ್ಪವನ್ನು ಮಾಡಿ ಭೀಮಾ ನಾಯಕರು ಘೋರವಾದ ತಪಸ್ಸನ್ನು ಕೈಗೊಳ್ಳುತ್ತಾನೆ. ಕೊನೆಗೆ ಶಿವ-ಪಾರ್ವತಿಯ ಕರುಣೆಯಿಂದ ಸಂತಾನ ಭಾಗ್ಯವನ್ನು ಈ ನಡುವೆ ತಮಗೆ ಮಗುವಾದರೆ ಭಕ್ತಿಯ ಹೆಸರಲ್ಲಿ ನಿನಗೆ ಒಪ್ಪಿಸುತ್ತೇವೆ ಎಂದು ಮರಿಯಮ್ಮನಲ್ಲಿ ಹರಕೆ ಹೊತ್ತಿರುತ್ತಾರೆ. ಹೀಗೆ ಹುಟ್ಟಿದ ಮಗು ಸಾಮಾನ್ಯ ಮಗುವಾಗಿರಲಿಲ್ಲ. ಅವನೊಬ್ಬ ಸತ್ಪುರುಷನಾಗಿದ್ದ. ಮಾಣಿಕ್ಯದಂತಹ ಮಗುವಿಗೆ ಸಾಕ್ಷಾತ್ ಮಾತೆ ಜಗದಂಬೆಯೇ ಮಾರುವೇಷದಲ್ಲಿ ಬಂದು, ಸೇವಾಭಾಯಾ, ಸೇವಾಲಾಲ ಎಂದು ನಾಮಕರಣ ಮಾಡುತ್ತಾಳೆ.*

*ಆ ಮಗು ಶಿವನ ಅವತಾರಿಯಾಗಿದ್ದು, ದೇವಿಯ ಭಕ್ತನಾಗಿದ್ದಾನೆ. ಆತನು ಬಂಜಾರ ಕುಲದ ವಂಶೋದ್ಧಾರಕನಾಗಿದ್ದು, ದುಷ್ಟರನ್ನು ಸಂಹರಿಸಿ, ಶಿಷ್ಟರ ರಕ್ಷಣೆ ಮಾಡುವನೆಂದು ಜಗದಂಬೆ ಹೇಳಿ, ಅಲ್ಲಿಂದ ಕಾಲಚಕ್ರ ಗತಿಸಿ ಸೇವಾಲಾಲನಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತ್ತನ್ನು ಈಡೇರಿಸಬೇಕೆಂದು ಧರ್ಮಿಣಿ ಬಾಯಿಯ ಕನಸಿನಲ್ಲಿ ಬಂದು ಸೇವಾಲಾಲನನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ. ಅದಕ್ಕೆ ಧರ್ಮಿಣಿಯು ಒಪ್ಪದೇ ಹೋದಾಗ ನೇರವಾಗಿ ಸೇವಾಲಾಲನನ್ನು ತನ್ನ ಭಕ್ತನಾಗಬೇಕೆಂದು, ತನ್ನ ಜತೆಗೆ ಬರಬೇಕೆಂದು ಕೇಳಿದಾಗ ಅವನೂ ಭಕ್ತನಾಗಲು ತಿರಸ್ಕರಿಸುತ್ತಾನೆ. ತಾನು ಪರಮಾತ್ಮನ ಸೇವಕನೆಂದು, ಮರಿಯಮ್ಮಳ ಸೇವೆ ಮಾಡಲಾರನೆಂದು ಹಠ ಹಿಡಿಯುತ್ತಾನೆ. ಇದರಿಂದ ಅವಮಾನಿತಳಾದ ಮರಿಯಮ್ಮ ಸೇವಾಲಾಲನ ಕುಟುಂಬದ ಸರ್ವಸ್ವವನ್ನು ನಾಶ ಮೂಲಕ ಪರಿಪರಿಯಾಗಿ ಕಾಡಿಸುತ್ತಾಳೆ. ಇದರಿಂದ ಹತಾಶನಾದ ಸೇವಾಭಾಯಾ ಅನಿವಾರ್ಯವಾಗಿ ಜಗನ್ಮಾತೆಯ ಭಕ್ತನಾಗಲು ಒಪ್ಪಿಕೊಳ್ಳುತ್ತಾನೆ.*

*ಕಾಲಗತಿಯಲ್ಲಿ ಹತ್ತಾರು ವರ್ಷಗಳವರೆಗೆ ಮರಿಯಮ್ಮನ ಸೇವೆಗೆ ತೊಡಗಿಸಿಕೊಂಡ ಸೇವಾಲಾಲರು ಮುಂದೆ ಸಮುದಾಯದಲ್ಲಿ ಜಗನ್ಮಾತೆಗಿಂತ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುತ್ತಾನೆ. ಜನರು ಮರಿಯಮ್ಮನನ್ನು ಮರೆತು ಸೇವಾಲಾಲನನ್ನೇ ಪೂಜಿಸುವಂತೆ ಮಹಾನ್ ಸಾಧಕನಾಗಿ ಮೆರೆಯುತ್ತಾನೆ. ತನ್ನ ಜನಸಮುದಾಯದ ಏಳಿಗೆಗಾಗಿ ಶ್ರಮಿಸಿ, ಅವರ ಬದುಕನ್ನು ಹಸನುಗೊಳಿಸಲು ನಿರಂತರವಾಗಿ ಹೋರಾಡುತ್ತಾನೆ. ಮರಿಯಮ್ಮಳಿಂದ ಮೊದಲೇ ವರವನ್ನು ಪಡೆದುಕೊಂಡಿದ್ದ ಸೇವಾಲಾಲ ತನ್ನ ಭಕ್ತರು ಕೇಳಿದ ವರಗಳ ತಕ್ಷಣವೇ ಈಡೇರಿಸಿ ಪ್ರಖ್ಯಾತಿಯನ್ನು ಪಡೆದುಕೊಂಡನು. ಈತನ ಜನಪ್ರಿಯತೆಯನ್ನು ಕಂಡು ಮರಿಯಮ್ಮ ಸಹಿಸಲಾರದೇ ಅವನು ಬ್ರಹ್ಮಚಾರಿಯಾಗಿರುವುದರಿಂದಲೇ ಇಷ್ಟೊಂದು ಪ್ರಭಾವಶಾಲಿಯಾಗಿರವನೆಂದು ಬಗೆದು, ಅವನಿಗೆ ಮದುವೆ ಮಾಡಿಸುವ ಮೂಲಕ ಆತನ ಜನಪ್ರಿಯತೆಯನ್ನು ಕುಗ್ಗಿಸಬೇಕೆಂದು ನಿರ್ಧರಿಸುತ್ತಾಳೆ. ಅಂತೆಯೇ, ಸೇವಾನ ಬಳಿಗೆ ಬಂದು ಮದುವೆಯಾಗುವಂತೆ ಅವನನ್ನು ಒತ್ತಾಯಿಸುತ್ತಾಳೆ. ಅದಕ್ಕೆ ಒಪ್ಪಿಕೊಳ್ಳದ ಸೇವಾಲಾಲ ತಾನು ಸಮಸ್ತ ಸಮುದಾಯದವರಿಗೆ ‘‘ಭಾಯಾ’’ (ಸಹೋದರ) ಆಗಿರುವುದರಿಂದ ನಾನು ಯಾರೊಂದಿಗೆ ಮದುವೆಯಾಗಲೆಂದು ವಾದಿಸುತ್ತಾನೆ.*

*ಎಲ್ಲಾ ನಾರಿಯರು ನನಗೆ ಸಹೋದರಿಯರು ಆಗಿರುವುದರಿಂದ ಈ ಮದುವೆ ಅಲ್ಲಗಳೆಯುತ್ತಾನೆ. ಆಧ್ಯಾತ್ಮ ಜೀವಿಯಾಗಿ ಸಾಧಕನಾಗಿದ್ದ ಸೇವಾಭಾಯಾ ಮರಿಯಮ್ಮನ ಮಾತನ್ನು ತಿರಸ್ಕರಿಸುತ್ತಾನೆ. ಮರಿಯಮ್ಮ ಅವಮಾನಿತಳಾಗಿ ಮತ್ತೆ ಮತ್ತೆ ಒತ್ತಾಯಿಸಿದಾಗ, ಬ್ರಹ್ಮನು ತನ್ನ ಹಣೆಬರಹದಲ್ಲಿ ಮದುವೆಯಾಗುವುದನ್ನು ಬರೆದಿಲ್ಲವಾದ್ದರಿಂದ ಮದುವೆಯಾಗುವುದಾದರೂ ಹೇಗೆ ? ಎಂದು ಪ್ರಶ್ನಿಸುತ್ತಾನೆ. ಹಾಗಾದರೆ, ನಿನ್ನ ಹಣೆಯ ಬರಹವನ್ನು ಪರೀಕ್ಷಿಸಲು ದೇವಲೋಕಕ್ಕೆ ಹೋಗೋಣವೆಂದು ಅವನನ್ನು ಕರೆಯುತ್ತಾಳೆ. ಅದಕ್ಕೆ ಸಮ್ಮತಿಸಿದ ಸೇವಾಭಾಯಾ ಮರಿಯಮ್ಮನೊಂದಿಗೆ ದೇವಲೋಕಕ್ಕೆ ಹೋಗಲು ಅಣಿಯಾಗುತ್ತಾನೆ. ಸೇವಾ ಭಾಯಾ ತಾನು ಸ್ವರ್ಗಲೋಕಕ್ಕೆ ತನ್ನ ಹಣೆಯ ಬರಹವನ್ನು ಕೇಳಲು ಬ್ರಹ್ಮನಲ್ಲಿಗೆ ಹೋಗುವ ಪ್ರಸ್ತಾಪಿಸಿ, ತನ್ನ ಶರೀರವನ್ನು ದೇವಸ್ಥಾನದಲ್ಲಿಟ್ಟು, ಬೇವಿನ ಸೊಪ್ಪಿನಲ್ಲಿ ಮುಚ್ಚಿಡಬೇಕೆಂದು, ತಾನು ಹಿಂದಿರುಗಿ ಬರುವವರೆಗೆ ನಿರಂತರವಾಗಿ ಭಜನೆ ಮಾಡುತ್ತಿರಬೇಕೆಂದು, ಬೇವಿನ ಸೊಪ್ಪಿನಲ್ಲಿರುವ ನನ್ನ ಶರೀರವನ್ನು ಅಪ್ಪಿ-ತಪ್ಪಿಯೂ ಯಾರೂ ಮುಟ್ಟಬಾರದೆಂದು ತನ್ನ ಬಂಧು-ಬಾಂಧವರಿಗೆಲ್ಲಾ ತಿಳಿಸಿ, ಸ್ವರ್ಗಕ್ಕೆ ಹೊರಡುತ್ತಾನೆ.*

*ಅವನು ಹೇಳಿ ಹೋದಂತೆ ಸಮುದಾಯದವರೆಲ್ಲಾ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಾರೆ. ಸ್ವರ್ಗದಲ್ಲಿ ಪರಮಾತ್ಮನ ಸಮಕ್ಷಮದಲ್ಲಿ ಮರಿಯಮ್ಮ ಮತ್ತು ಸೇವಾಲಾಲ ತಮ್ಮ ವಾದಗಳನ್ನು ಮಂಡಿಸುತ್ತಾರೆ. ಕೊನೆಗೆ ಸೇವಾಲಾಲನ ಹಣೆಯ ಬರಹವನ್ನು ಪರೀಕ್ಷಿಸಿದ ಪರಮಾತ್ಮನು ಅವನಿಗೆ ಮದುವೆ ಎಂಬುದೇ ಸ್ಪಷ್ಟಪಡಿಸುತ್ತಾನೆ. ಇದರಿಂದ ಇನ್ನಷ್ಟು ಅವಮಾನಿತಳಾದ ಮರಿಯಮ್ಮ ಇನ್ನು ತನಗೆ ಉಳಿಗಾಲ ಇಲ್ಲವೆಂದು, ಲಂಬಾಣಿ ಸಮುದಾಯದಲ್ಲಿ ತನ್ನ ಅಸ್ತಿತ್ವವೇ ಇಲ್ಲದಂತಾಗುವುದೆಂದು ಯೋಚಿಸಿ ಸೇವಾನಿಗಿಂತ ಮೊದಲೇ ಭೂಲೋಕಕ್ಕೆ ಇಳಿದು ಬಂದು ಮಾರುವೇಷದಲ್ಲಿ ನೇರವಾಗಿ ತಾಯಿ ಧರ್ಮಿಣಿ ಬಾಯಿ ಬಳಿಗೆ ಹೋಗುತ್ತಾಳೆ. ‘‘ನಿನ್ನ ಮಗ ಸೇವಾಲಾಲ ದೇವಸ್ಥಾನದಲ್ಲಿ ಸತ್ತು ಬಿದ್ದಿದ್ದು, ನೀನು ಇಲ್ಲಿ ನಿಶ್ಚಿಂತವಾಗಿ ಕಸೂತಿ ಹಾಕುತ್ತಿದ್ದೀಯ ?’’ ಎಂದು ಅವಳಿಗೆ ಹೇಳುತ್ತಲೇ ದು:ಖಿತಳಾದ ಧರ್ಮಿಣಿ ಬಾಯಿ ಎದ್ದು-ಬಿದ್ದು ದೇವಸ್ಥಾನಕ್ಕೆ ಬಂದು ಯಾರು ತಡೆದರೂ ಕೇಳದೇ ಮಗನ ದೇಹದ ಮೇಲೆ ರಪ್ಪನೇ ಬಿದ್ದು ಗೋಳಿಡುತ್ತಾಳೆ.*

*ಸೇವಾ ಭಾಯಾ ಭೂಲೋಕಕ್ಕೆ ಕಾಲಿಡುವಷ್ಟರಲ್ಲಿ ಆತನ ದೇಹಕ್ಕೆ ಮನುಷ್ಯರ ಸ್ಪರ್ಶವಾಗುತ್ತಿದ್ದಂತೆಯೇ ಆತನ ಆತ್ಮವು ಮರಳಿ ದೇಹವನ್ನು ಸೇರದೇ ಹಿಂದಿರುಗಿ ಸ್ವರ್ಗಕ್ಕೆ ಹೋಗಿಬಿಡುತ್ತದೆ. ಹೀಗೆ ಅಮರನಾದ ಸೇವಾಲಾಲರ ದೇಹಾಂತ್ಯವಾದ ಮೇಲೆ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಅಕ್ಕೋಲ ತಾಲ್ಲೂಕಿನ ಸಮೀಪದಲ್ಲಿರುವ ಪೊಹರಾಗಢ ಎಂಬಲ್ಲಿ ಅಂತ್ಯಸಂಸ್ಕಾರ ನಡೆಯಿತು. ಈಗ ಅಲ್ಲಿ ಸೇವಾಲಾಲ್ ಮತ್ತು ಜಗನ್ಮಾತೆ ಮರಿಯಮ್ಮಳ ಬೃಹತ್ ಮಂದಿರಗಳನ್ನು ಕಟ್ಟಿದ್ದು, ಅದು ಬಂಜಾರರ ಪುಣ್ಯಕ್ಷೇತ್ರವಾಗಿದೆ. ಭಾರತದಾದ್ಯಂತ ನೆಲೆಯಾಗಿರುವ ಅಸಂಖ್ಯಾತ ಬಂಜಾರರು ಈ ತೀರ್ಥಕ್ಷೇತ್ರಕ್ಕೆ ಸಾಗರೋಪಾದಿಯಲ್ಲಿ ಬಂದು ದೇವರ ದರ್ಶನ ಪಡೆದು ಪಾವನರಾಗುತ್ತಾರೆ. ಸೇವಾಲಾಲರ ಜನ್ಮಭೂಮಿ ಕರ್ನಾಟಕದ ಸೂರಗೊಂಡ ನಕೊಪ್ಪದಲ್ಲಿ ಇಂದು ಕರ್ನಾಟಕ ಸರಕಾರದ ಸುಪರ್ದಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಜರುಗಿ, ವಿಸ್ತಾರವಾದ ತೀರ್ಥಕ್ಷೇತ್ರವಾಗಿ ಪರಿಣಮಿಸಿದೆ. ಸರಕಾರ ಈಚೆಗೆ ಮತ್ತೆ 13 ಎಕರೆ ಜಮೀನನ್ನು ನೀಡಿ, ಬೃಹತ್ ಪ್ರಮಾಣದಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದೆ.*

*ಪ್ರತಿ ವರ್ಷ ನಡೆಯುವ ಸಂತ ಸೇವಾಲಾಲನ ಜಯಂತಿಗಾಗಿ ಕರ್ನಾಟಕದ ಭಕ್ತಾದಿಗಳು ಶಬರಿಮಲೆಯ ಸ್ವಾಮಿಗಳಂತೆ ವ್ರತಾಧಾರಿಗಳಾಗಿ ಶ್ವೇತವಸ್ತ್ರಗಳನ್ನುಟ್ಟು, ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ವಿಜೃಂಭಣೆಯಿಂದ ಯಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಿದ್ದಾರೆ. 2018ರ ಈ ಜಯಂತಿಯನ್ನು ಕರ್ನಾಟಕ ಸರಕಾರ ಅಧಿಕೃತವಾಗಿ ರಾಜ್ಯಾದ್ಯಂತ ಆಚರಿಸಲು ಮುಂದಾಗಿದ್ದು, ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಾಗರೋಪಾದಿಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದೆ. ಸೇವಾಲಾಲರು ಯೋಗಿಯಾಗಿ, ಮಹಾಸಂತರಾಗಿ ಲೋಕಕಲ್ಯಾಣಕ್ಕಾಗಿ ದೇಶಾದ್ಯಂತ ಸಂಚರಿಸಿ, ಅವರ ಬದುಕನ್ನು ಪಾವನ ಮಾಡುತ್ತಾ, ಅವರ ಬಾಳಿಗೆ ಬೆಳಕನ್ನು ನೀಡುತ್ತಾ, ಬಡತನ, ಕಷ್ಟ-ಕಾರ್ಪಣ್ಯಗಳಿಂದ ಬಳಲುತ್ತಿದ್ದವರಿಗೆ ಸುಂದರವಾಗಿ, ಸುವಿಚಾರಗಳನ್ನು ಹೇಳುತ್ತಾ, ತಿದ್ದಿ-ತೀಡುತ್ತಾ ಕಲ್ಯಾಣ ಮಾಡಿದರು.

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು