ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

31.1.18

ಮಡಿವಾಳ ಮಾಚಿದೇವ

ಮಡಿವಾಳ ಮಾಚಿದೇವ

೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ , ಜಾತೀಯತೆ, ಮೇಲು -ಕೀಳು ತಾರತಮ್ಯ , ಅಸ್ಪ್ರುಶ್ಯತೆ , ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣದಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು , ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರ ಗಣ್ಯ ಬಳಗದಲ್ಲಿ ' ಮಡಿವಾಳ ಮಾಚಿದೇವ' ಅತ್ಯಂತ ಪ್ರಕಾಶಮಾನವಾಗಿ ಕಂಡುಬರುವರು...

ಅವತಾರಿ ಪುರುಷ

ದಕ್ಷನನ್ನು ಸಂಹಾರ ಮಾಡಿ ಅತಿ ಉತ್ಸಾಹದಿಂದ ಶಿವನನ್ನು ಕಾಣಲು ವೀರಭದ್ರ ಶಿವನ ಸಭೆಯೊಳಗೆ ನಡೆದು ಬರುತ್ತಾನೆ. ಸಭೆಯಲ್ಲಿರುವ ಶಿವ ಭಕ್ತನಿಗೆ ಈತನ ಉತ್ತರೀಯ ಸೆರಗು ತಾಕುತ್ತದೆ. ವಿಜಯದ ಉದ್ವೇಗದಲ್ಲಿ ಆದ ಆ ತಪ್ಪಿಗೆ, ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ ಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕ ಪೂರೈಸಿ ದೋಷ ಮುಕ್ತನಾಗಿ ಬರುವಂತೆ ಶಿವನ ಆದೇಶವಾಗುತ್ತದೆ. ಮಾಚಿದೇವರನ್ನು ವೀರ ಭದ್ರನ 'ದೇವಾಂಶ ಸಂಭೂತ ಅವತಾರ ಪುರುಷನೆಂದು' ನಿರೂಪಿಸುವುದು ಸಾಮಾನ್ಯ ರೂಢಿಯಾಗಿದೆ..

ಉದಯಿಸಿದ ಶರಣ ಕಿರಣ

ಬಿಜಾಪುರ ಜಿಲೆಯ ಸಿಂಧಗಿ ತಾಲೂಕಿನ 'ದೇವರ ಹಿಪ್ಪರಗಿಯಲ್ಲಿ' ಪರುವತಯ್ಯ -ಸುಜ್ನಾನವ್ವ ದಂಪತಿಗಳ ಪುತ್ರ ರತ್ನ -ಶರಣ ಕಿರಣ ಮಡಿವಾಳ ಮಾಚಿದೆವರು ಜನಿಸಿದ್ದು ಕ್ರಿ .ಶ ೧೧೨೦-೧೧೩೦ ರ ನಡುವೆ.

ಕ್ರಾಂತಿಕಾರಿ ಗುರುವಿನ ಬೋಧನೆ

ಮಾಚಿದೇವರ ವ್ಯಾಸಂಗ- ಅಪಾರ ಜ್ಞಾನವನ್ನು ಅವಲೋಕಿಸಿದಾಗ ಉತ್ತಮ ಗುರುಗಳ ಬೋಧನೆ ಸಿಕ್ಕಿದ್ದು ಮನವರಿಕೆಯಾಗುತ್ತದೆ. ಶೂದ್ರರಿಗೆ ಶಿಕ್ಷಣ ನಿಷೇಧಿಸಲ್ಪಟ್ಟ ಕಾಲದಲ್ಲಿ ಅಕ್ಷರ ಜ್ಞಾನ -ಸಕಲ ಶಾಸ್ತ್ರಗಳನ್ನು ಹೇಳಿಕೊಟ್ಟ ಗುರು ' ಮಲ್ಲಿಕಾರ್ಜುನಯ್ಯ ಸ್ವಾಮಿಗಳು' ನಿಜಕ್ಕೂ ಒಬ್ಬ ಕ್ರಾಂತಿಕಾರಿ ಗುರುಗಳೆಂಬುದು ಸ್ಪುಷ್ಟವಾಗುತ್ತದೆ..

ಕಾಯಕ ಹಿಮಾಚಲ -ಮಾಚಯ್ಯ

ಮಾಚಯ್ಯ ಹುಟ್ಟಿನಿಂದಲೂ ಮಡಿವಾಳನಾಗಿದ್ದು, ಅಚಲ ಕಾಯಕ ನಿಷ್ಟನಾಗಿದ್ದ , ಹಿಮಾಲಯದಷ್ಟು ಧೃಢನಾಗಿದ್ದ , ತನ್ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದ. ಜಂಗಮ ವೇಷದಲ್ಲಿ ಬಂದ ಶಿವನ ಬಟ್ಟೆಗಳನ್ನು ಆತನ ಷರತ್ತಿನ ಮೇರೆಗೆ ತನ್ನ ಹೆಂಡತಿ 'ಮಲ್ಲಿಗೆಮ್ಮಳ' ಎದೆ ಬಗೆದ ರಕ್ತದಲ್ಲಿ ಒಗೆದು ಒಣಗಿಸಿಕೊಂಡು ಬಂದ ಸಂದರ್ಭದ ದಂತ ಕಥೆ ಹಿಮಾಚಲಕ್ಕಿಂತಲೂ ಗಟ್ಟಿ ಕಾಯಕದ ಹಿರಿಯಾಳು ಮಾಚಿದೇವನಾಗಿದ್ದ ಎಂಬುದನ್ನು ತಿಳಿಸುತ್ತದೆ.

ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳ ಮೈಲಿಗೆಯ ಬಟ್ಟೆಗಳನ್ನು 'ಮಡಿ' ಮಾಡಿ ಮುಟ್ಟಿಸುವ ಕಾಯಕ ಇವರಾದಗಿತ್ತು . ಮಡಿ ಬಟ್ಟೆ ಹೊತ್ತುಕೊಂಡು 'ವೀರ ಘಂಟೆ' ಬಾರಿಸುತ್ತ , ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂದು ನಿಯಮವನ್ನು ವಿಧಿಸಿಕೊಂಡಿದ್ದರು .

ಕುಚೇದ್ಯಕ್ಕೆ ಬಂದು ಮುಟ್ಟುವ ಭವಿಗಳನ್ನು ತುಂಡರಿಸಿ ಚೆಲ್ಲುತ್ತ ಮುನ್ನಡೆಯುವುದು ಮಾಚಿದೇವರ ನಡತೆಯಾಗಿತ್ತು. ಭವಿಯೋರ್ವ ಮಡಿ ಗಂಟು ಮುಟ್ಟಿ ಮೈಲಿಗೆಗೊಳಿಸಿದ್ದಕ್ಕೆ ಆತನ ಶಿರವನ್ನು ಆಕಾಶಕ್ಕೆ ತೂರಿದ ಘಟನೆಯಿಂದಾಗಿ, ಭಕ್ತಿ ಭಾವದಿಂದ ಮಡಿವಾಳಯ್ಯನನ್ನು ಜನರು ಗೌರವಿಸುತ್ತಿದ್ದರು. ಕಾಯಕ ಮಾಡದ -ಸೋಮಾರಿಗಳ-ಬಡವರನ್ನು ಶೋಷಿಸುವ -ಸೋಮಾರಿಗಳ- ದುರ್ಗುಣವುಳ್ಳವರ ಬಟ್ಟೆಗಳನ್ನೆಂದು ಆತ ಮುಟ್ಟುತ್ತಿರಲಿಲ್ಲ. 'ಅರಸುತನ ಮೇಲಲ್ಲ-ಅಗಸತನ ಕೀಳಲ್ಲ ' ಎಂಬುದನ್ನು ಜನಕ್ಕೆ ಸಾರಿದರು.

ಉನ್ನತ ವ್ಯಕ್ತಿತ್ವ

ಮಡಿವಾಳ ಮಾಚಿದೇವರ ಬಗ್ಗೆ ಹಲವು ಐತಿಹ್ಯಗಳು ಪ್ರಚಾರದಲಿ ಇವೆ. ಅವುಗಳಲ್ಲಿ ಕೆಲವು-

ಮೊದಲನೆಯ ಪ್ರಸಂಗ

ನುಲಿಯ ಚಂದಯ್ಯ ತನ್ನ ಕಾಯಕಕ್ಕೆ ಬೇಕಾದ ಹುಲ್ಲನ್ನು ಕೆರೆಯಲ್ಲಿ ಕುಯ್ಯುತ್ತಿದ್ದಾಗ ಧರಿಸಿದ 'ಇಷ್ಟ ಲಿಂಗ ' ಜಾರಿ ಕೆರೆಯೊಳಗೆ ಬೀಳುತ್ತದೆ. ಜಾರಿ ಬಿದ್ದ ಲಿಂಗ ಮತ್ತೇಕೆ? ಭಾವ ಲಿಂಗವೊಂದನ್ನೇ ಪೂಜಿಸಿದರೆ ಸಾಕೆಂದು ಹುಲ್ಲಿನ ಹೊರೆ ಹೊತ್ತು ಮನೆಗೆ ಮರಳುವನು. ಆಗ ಲಿಂಗದೇವ, ಮಾಚಿದೇವರ ಮೊರೆ ಹೋಗುತ್ತಾನೆ. ಮಾಚಿ ತಂದೆಗಳು 'ಸವಿ ಬೇಕು- ಹಣ್ಣು ಬೇಡವೆಂದರೆ' ಹೇಗೆ? ಗುರು ಪೂಜೆ ಅರಿದೊಡೆ ಲಿಂಗ ಪೂಜೆ ಬಿಡಲಾಗದೆಂದು ಚಂದ್ರಯ್ಯನವರ ತಪ್ಪನ್ನು ಅರಿವನ್ನುಂಟುಮಾಡುವರು - ಅದೊಂದು ದಿವ್ಯ ಪ್ರಸಂಗ.

ಎರಡನೆಯ ಪ್ರಸಂಗ

'ಬೇಡುವ ಭಕ್ತರಿಲ್ಲದೆ ಬಡವನಾದೆನೆಂಬ' ಬಸವಣ್ಣನವರು 'ಅಹಂ' ಭಾವನೆಯಿಂದ ಮಾತನಾಡಿರುತ್ತಾರೆ, ಆಗ ಮಾಚಿದೆವರು ಬಸವಣ್ಣನವರಿಗೆ ' ನೀವೊಬ್ಬರೇ ದಾನ ಮಾಡಲು ಹುಟ್ಟಿದ ದಾನಿಗಳು , ಉಳಿದೆಲ್ಲ ಭಕ್ತರು ಭಿಕಾರಿಗಳು, ದರಿದ್ರರೆ' ? ಎಂದು ಪ್ರಶ್ನಿಸುತ್ತಾರೆ. ಮುಂದೆ ಎನ್ನ ಮಹಾನುಭಾವರ ಬಡತನದಿರವ ನಿನಗೆ ತೋರುವೆನೆಂದು ಪಾದದಿಂದ ನೀರನ್ನು ಚಿಮ್ಮಲು ಆ ನೀರು ಹನಿಗಳೆಲ್ಲ ಮುತ್ತು ರತ್ನಗಳಾದವು. ಹೀಗೆ ವಿನಯ, ಇಂದ್ರಿಯ ನಿಗ್ರಹ, ನಿರಹಂಕಾರಗಳು ಭಕ್ತಿಯ ಕುರುಹು ಎಂದು ತಿಳಿಸುತ್ತ ಅಹಂಕಾರ ನಿರ್ಮೂಲನೆಗೊಳಿಸಿದ.

ಮೂರನೆಯ ಪ್ರಸಂಗ

ಮತ್ತೊಂದು ಸಂದರ್ಭದಲ್ಲಿ ಮೇದರ ಕೇತಯ್ಯ ಬಿದಿರು ಕಡಿಯುವಾಗ ಕೆಳಗೆ ಬೀಳುತ್ತಾನೆ. ಎದೆಗೆ ಬಿದಿರು ಮೊಳೆ ಚುಚ್ಚಿ ಕೇತಯ್ಯ ಶಿವ ಸನ್ನಿಧಿ ಸೇರುತ್ತಾನೆ. ಆಗ ಬಸವಣ್ಣ ಮಾಚಯ್ಯನನ್ನು ಕರೆಸುವನು, ಮಾಚಯ್ಯ ಬಂದು ಶಿವಶರಣರ ಪ್ರಾಣವೇ ತನ್ನ ಪ್ರಾಣವೆಂದು ನಂಬಿದ ಬಸವಣ್ಣ ಇನ್ನೂ ಜೀವಂತವಾಗಿದ್ದು ತನ್ನ ವಚನ ಪಾಲಿಸಿಲ್ಲವೆಂದ. ಇದನ್ನರಿತ ಬಸವಣ್ಣ ಪ್ರಾಣ ಬಿಡುವನು. ಆ ಪ್ರಾಣ ಕೇತಯ್ಯನನ್ನು ಹಿಂಬಾಲಿಸುತ್ತದೆ. ಬಸವಣ್ಣನ ನಿಷ್ಠೆ ಮೆಚ್ಚಿದ ಮಾಚಯ್ಯ, ಶಿವನನ್ನು ಕುರಿತು ಕೆರಳಿ ನುಡಿದು 'ಇಬ್ಬರ ' ಪ್ರಾಣಗಳನ್ನು ಶಿವನನ್ನು ಮರಳಿ ಪಡೆದನೆಂದು ತಿಳಿದು ಬರುತ್ತದೆ.

ನಡೆ-ನುಡಿಯಲ್ಲಿ ತಪ್ಪಿದ ವ್ಯಕ್ತಿ ಇಂಥವರೇ ಆಗಿರಲಿ ಆಚರಣೆ ಪ್ರಸಂಗ ಬಂದಾಗ 'ದೇವರನ್ನೂ' ಕೂಡಾ ಪ್ರಶ್ನಿಸುವ ಪ್ರವೃತ್ತಿ ಮಾಚಯ್ಯನದಾಗಿತ್ತು.

ಕಲ್ಯಾಣದ ಅನುಭವ ಮಂಟಪಿ

ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , 'ಮಡಿ' ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ ಮಹಾ ಘನತೆಗೆ ಸಾಕ್ಷಿಯಾಗಿದೆ...

ಗಣಾಚಾರ ಸಂಪನ್ನ ವೀರ ಶರಣ - ಮಡಿವಾಳ ಮಾಚಿದೇವ

ಹಿಪ್ಪರಿಗೆಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ಕಟ್ಟಿರಲು, ಹರಿಗೋಲ ಹಂಗಿಲ್ಲದೆ ಶಿವನನ್ನು ನೆನೆಯಲು ನದಿ ಇಬ್ಬಾಗವಾಯ್ತು. ಆ ಮಾರ್ಗ ಮಧ್ಯದಿಂದ ಮಾಚಿ ತಂದೆ ನಡ ೆದು ಬರುತ್ತಾನೆ...

ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ. ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ , ಅದನ್ನು ಲೆಕ್ಕಿಸದೆ ಮಾಸಿದ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ. ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳಯ್ಯ ಕೋಪಗೊಂಡು ಸಿಟ್ಟಿನಿಂದ ನೋಡಲು ಆ ಕ್ಷಣದಲ್ಲಿ ಗಂಟು ಉರಿದು ಹೋಯ್ತು.

ಇದು ಮಡಿವಾಳಯ್ಯನ 'ಅಹಂಕಾರವೆಂದು' ಭಾವಿಸಿದ ಬಿಜ್ಜಳ ಅವರನ್ನು ಸೆರೆ ಹಿಡಿದು ತರಲು ಕುಂಟ -ಕುರುಡರ ಪಡೆಯೊಂದನ್ನು ಕಳುಹಿಸಿದ. ಮಡಿವಾಳಯ್ಯ ತನ್ನ ಶಕ್ತಿಯಿಂದ ಕುರುಡರಿಗೆ ಕಣ್ಣು ಕಾಣುವಂತೆ ಮತ್ತು ಕುಂಟರಿಗೆ ಕಾಲು ಬರುವಂತೆ ಮಾಡಿ ಅಂಗ ಸೌಷ್ಟ ವರನ್ನಾಗಿ ಮಾಡಿ ಕಳುಹಿಸಿದ. ಇದರಿಂದ ಉರಿದೆದ್ದು ಬಿಜ್ಜಳ 'ಮದೋನ್ಮತ್ತ' ಆನೆಯನ್ನ ಮಾಚಯ್ಯನ ಮೇಲೆ ಹರಿ ಹಾಯಲು ಬಿಟ್ಟ. ಸೈನಿಕರ ತುಕಡಿಯೊಂದನ್ನೂ ಕಳುಹಿಸಿದ. ಆನೆ ಹಾಗೂ ಅವರನ್ನೆಲ್ಲ ಸದೆ ಬಡಿದು ಜಯ ಶಾಲಿಯಾದ. (ಬಹುತೇಕ ಮಡಿವಾಳ ಬಂಧುಗಳ ಮನೆಯಲ್ಲಿ ಈ ಸನ್ನಿವೇಶದ ಫೋಟೋ ಇರುವುದು - ಆದ್ರೆ ಬಹು ಜನರಿಗೆ ಅದರ ಹಿನ್ನೆಲೆ ಗೊತ್ತಿಲ್ಲ..)ಕಾಲಾಂತರದಲ್ಲಿ ಬಿಜ್ಜಳನಿಗೆ ಮಾಚಿದೇವರ ಉನ್ನತ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಬಿಜ್ಜಳ ಶರಣಾಗತನಾಗುವನು...

ಮುಂದೆ 'ಕಲ್ಯಾಣ ಕ್ರಾಂತಿ'ಯ ಸಂದರ್ಭದಲ್ಲಿ ಮಾಚಿದೆವರು ಹೊತ್ತ 'ಜವಾಬ್ಧಾರಿ' ಗುರುತರವಾದುದು. ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ 'ಭೀಮ ರಕ್ಷೆಯಾಗಿ' ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡ ಕೋಡ, ಮೂಗ ಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳಿವಿಗೆ ತಲುಪಿಸಿದ ಸಾಹಸಿ ಮಾಚಯ್ಯ.

ಸಮಸ್ತ ಶರಣರು ಉಳಿವೆಯಲ್ಲಿ ಲಿಂಗೈಕ್ಯರಾಗಲು ತಮ್ಮ ಮಹಾನ್ ಕರ್ತವ್ಯ ಪೂರೈಸಿ ಸಿಂದಗಿ ತಾಲೂಕಿನ ಕಲಿಪುರ (ಇಗಿನ ಕಲಕೇರಿ)ತನ್ನ ಗುರುವಾದ ವೀರಘಂಟೈರ ಜೊತೆಗೆ ಜೀವಂತ ಸಮಾದಿಯಾಗಿ ಗುರು ಶಿಷ್ಯರು ಐಕ್ಯರಾದರು....ಇಂದಿಗೂ ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯ ದಿನ ಮೂಲಾ ನಕ್ಷತ್ರದ ಸಮಯದಲ್ಲಿ ರಥೋತ್ಸವ ನಡೆಯುತ್ತದೆ. ಸುಮಾರು ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ವರ್ಷದಲ್ಲಿ ಎರಡು ಸಲ ಅಗ್ನಿ ಉತ್ಸವ ನಡೆಯತ್ತದೆ.ಕಲಕೇರಿಯಲ್ಲಿ ಮಡಿವಾಳ ಮಾಚಿ ದೇವರ ಕೊಂಡಾಡಲು ಅಕ್ಷರಗಳೇ ಸಾಲದು....

ಆಧಾರ

ಚಿತ್ರದುರ್ಗದ ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠದ ವತಿಯಿಂದ ಪ್ರಕಟಣೆಗೊಂಡ (ವರ್ಷ :೨೦೦೯)ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು ಮತ್ತು ಡಾ: ಸಂಗಮೇಶ ಮ. ಕಲಹಾಳ ಅವರ ಸಂಪಾದನೆಯ "ಶ್ರೀ ಮಾಚಿದೇವ ಪ್ರಕಾಶ" (ಮಾಚಿದೇವರ ಜೀವನ ಸಂಕ್ಚಿಪ್ತ ಚರಿತ್ರೆ-ಚಿತ್ರ ಸಹಿತ ಹಾಗೂ ವಚನಗಳು ) ಎಂಬ ಪುಟ್ಟ ಪುಸ್ತಕದಲ್ಲಿನ ಪೂರ್ಣ ಅಂಶಗಳನ್ನು ನಮ್ಮ ಸರ್ವ ಸಹ ಮಡಿವಾಳ ಬಂಧುಗಳ ಜ್ಞಾನಾರ್ಜನೆಗಾಗಿ ಇಲ್ಲಿ ನೀಡಲಾಗಿದೆ..

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು